ನನ್ನೊಳಗೆ ನಾನಿಳಿದು

ನನ್ನೊಳಗೆ ನಾನಿಳಿದು ನನ್ನಿರವ ನಾ ತಿಳಿದು
ನನ್ನಿಯಾ ತಿಳಿಗೊಳದಿ ನಾನೀಸಬೇಕು
ನನ್ನ ಹೃದಯದ ಪುರದಿ ನೆಲೆಸಿರುವ ಚಿನ್ಮಯನ
ಕಣ್ಣೆದುರು ಕಾಣುವರೆ ಮನ ತೊಳೆಯಬೇಕು ||1||

ಸ್ವಾಂತರಂಜನೆಯೊಂದೇ ಏಕಾಂತದನುಭೂತಿ
ಪರ ಹಿತ ಪಥವಹುದು ಪರಮಪದಕೆ
ಸಮರಸದ ಸಂಹಿತೆಯು ಸಮನಿಸುವ ಸುಮ ಮನವು
ಸ್ವಾರ್ಥ ನಿಯಮನವೆಂಬ ವ್ರತವು ಬೇಕದಕೆ ||2||

ನಾ ನಿಮಿತ್ತನು ಮಾತ್ರ ನಿಯಾಮಕನು ಬೇರಿಹನು
ಪೂರ್ವ ನಿಗದಿತ ಕಾರ್ಯ; ಕರಣ ನಾನು
ಎಲ್ಲರೊಳಗಿನ “ನಾನು” ಒಂದೆಂಬ ಅನುಭಾವ
ಸಿದ್ದಿಸಿದ ಜೀವನವು ಮಧುರ ಜೇನು ||3||

ದೃಶ್ಯದನುಭವಕಿಹುದು ಪರಿಮಿತಿಯ ಬಂಧನವು
ಶ್ರುತಿಯ ರಮ್ಯತೆಗೆಲ್ಲಿ ಅಳತೆಗೋಲು
ಹತ್ತಿದರೂ ಸುತ್ತಿದರೂ ಮತ್ತೆ ಹತ್ತಂಗುಲವು
ನಡೆದಷ್ಟು ನುಡಿದಷ್ಟೂ ಅದರ ಹರಹು ||4||

ಸ್ವಾನುಭವ ವಿಸ್ತಾರ ಪರೇಂಗಿತದ ಸ್ವೀಕಾರ
ಭಾರತದ ಚಿಂತನೆಯ ಕ್ರಮದ ಸಾರ
ವಾದಗಳೊ ಭೇದಗಳೋ ವಾಕ್ಯಾರ್ಥಗಳು ಉಂಟು
ಸಲ್ಲದೀ ಮಣ್ಣಿನಲಿ ವಿತಂಡವಾದ ||5||

Leave a Reply

Your email address will not be published. Required fields are marked *