ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ

ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ನಮ್ಮೆಲ್ಲ ಭೇದಭಾವಗಳು ದೂರವಾಗಲಿ      || ಪ ||

ತೋಟದಲ್ಲಿ ಹಲವು ಬಣ್ಣ ಬಣ್ಣ ಹೂಗಳು
ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು
ಹೂಗಳಂತೆ ಮತಗಳೆಲ್ಲ ಕಂಪು ಸೂಸಲಿ
ನಮ್ಮೆಲ್ಲ ಭೇದಭಾವಗಳು ದೂರವಾಗಲಿ       || 1 ||

ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೇ ?
ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೇ
ಜಗದ ಸೃಷ್ಟಿಯಲ್ಲಿ ಜೀವ ಸುಖದಿ ಬಾಳಲಿ
ನಮ್ಮೆಲ್ಲ ಭೇದಭಾವಗಳು ದೂರವಾಗಲಿ      || 2 ||

ಮಣ್ಣಿನಿಂದ ಆದ ಮಡಿಕೆ ಮಣ್ಣಿಗನ್ಯವೇ ?
ಚಿನ್ನದಿಂದ ಆದ ಒಡವೆ ಚಿನ್ನಕನ್ಯವೇ ?
ದೇವನಿಂದ ಬಂದ ಜೀವ ದೇವರಾಗಲಿ
ನಮ್ಮೆಲ್ಲ ಭೇದಭಾವಗಳು ದೂರವಾಗಲಿ     || 3 ||

ಸೂರ್ಯನಂತೆ ಸಂತರೆಲ್ಲ ಜಗದಲಿರುವರು
ವರುಣನಂತೆ ಜ್ಞಾನಸುಧೆಯ ಧರೆಗೆ ಎರೆವರು
ಬುದ್ಧ ಬಸವ ಜ್ಞಾನ ಬೋಧೆ ಜಗವ ಬೆಳಗಲಿ
ನಮ್ಮೆಲ್ಲ ಭೇದಭಾವಗಳು ದೂರವಾಗಲಿ     || 4 ||

Leave a Reply

Your email address will not be published. Required fields are marked *