ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿ
ನಿನ್ನ ನಡೆಯ ನೆಲೆಯನಾಂತು ದೇಶಕಾರ್ಯ ತೊಡಗಲಿ || ಪ ||
ಮೊಗ್ಗು ಮೊಗವು ಬಿರಿಬಿರಿಯೆ ಹಿಡಿಹೂಗಳು ತಾವರಳಲಿ
ದಿವ್ಯಗಂಧವೆಲ್ಲ ಹರಡಿ ಅವನಿಯು ಪರಿಮಳಿಸಲಿ || 1 ||
ಪುಷ್ಪಫಲದ ವಾಂಛೆಯಳಿದು ಸಮರ್ಪಣೆಯ ಭಾವ ತಳೆದು
ಧ್ಯೇಯದೇವನೆದುರಿನಲ್ಲಿ ಸ್ವಾರ್ಥ ಹೋಮವಾಗಲಿ || 2 ||
ಲೋಕಸೇವಾ ಭಕ್ತಿ ಭಾವ ಎಂಬುದೊಂದೇ ಧ್ಯೇಯ ದೇವ
ನಿರತ ಪೂಜೆಯಿಂದ ದೇವ ನಿನ್ನ ರೂಪ ದೊರೆಯಲಿ || 3 ||
ದಿವ್ಯ ಭವ್ಯ ರಾಷ್ಟ್ರಜ್ಯೋತಿ ನಿನ್ನ ತೇಜಕಿಲ್ಲ ಸಾಟಿ
ಜ್ಯೋತಿರ್ಮಯ ದೀಪ್ತಿಯಿಂದ ಸಕಲ ಹೃದಯ ಬೆಳಗಲಿ || 4 ||
ನಿನಗೆ ಸರಿಸಮಾನರೆನಿಸಿ ಬೆಳೆದು ವರ್ಧಮಾನರೆನಿಸಿ
ದೇಶ ಧರ್ಮ ಸಂಸ್ಕೃತಿಗಳು ನೆಲೆಯನಾಂತು ಬೆಳೆಯಲಿ || 5 ||