ನಮನ ನಿನಗೆ ಕನ್ನಡ ತಾಯೆ |
ಅರ್ಪಿಸುವೆ ಮೊದಲ ತೊದಲ ನುಡಿಗಳ ಮಾಲೆ ||
ಲೋಕ ಲೋಕ ವಿನುತ ಕವಿ ಕುಲ ಸಂಪ್ರೀತೆ |
ಹೃದಯ ತುಂಬಿ ನಾ ಪೊಡಮಡುವೆ ತಾಯೆ ನಿನಗೆ || ಪ ||
ಪಂಪನ ನೃಪತುಂಗನ ನುಡಿ ಕನ್ನಡ |
ರನ್ನಪೊನ್ನ ಜನ್ನರ ಸವಿಗನ್ನಡss ||
ಮುದ್ದಣ ಕುಮಾರವ್ಯಾಸ ಕನ್ನಡ |
ಮುಗ್ಧ ಜನರ ಮುದ್ದು ಭಾಷೆ ಕನ್ನಡ ||
ಭಾವದ ಅಂಗಳಕೆ | ಭಾಷೆಯ ಹೊಂಬೆಳಕೆ ||
ಕರ್ನಾಟಕ ಜನಮನದೊಲವೇ || 1 ||
ಗೋದಾವರಿ ತುಂಗೆ ಭದ್ರೆ ಕಾವೇರಿ |
ಉತ್ತುಂಗದ ಶಿಖರ ಮಾಲೆ ಸಹ್ಯಾದ್ರಿ ||
ಸುತ್ತಮುತ್ತ ಹಚ್ಚಹಸಿರಿನೋಕುಳಿ |
ವಿಸ್ತರಿಸಿದೆ ಪಶ್ಚಿಮದಿ ಕರಾವಳಿ |
ಧನಧಾನ್ಯದ ನಿಧಿಯೇ | ಸ್ವರ್ಗದ ಸನ್ನಿಧಿಯೇ||
ಕರ್ನಾಟಕ ನೆಲ ಜಲ ಫಲವೇ || 2 ||
ಕಲಿಕದಂಬ ವಿಜಯನಗರದ ವೈಭವವೇ
ಸೂಸುವ ವರ ಶ್ರೀಗಂಧದ ಸೌರಭವೇ
ಶಿಲೆಶಿಲೆಯಲು ಕಲೆಯರಳಿದ ಗುಡಿಗಳೇ
ಸಮರಸತೆಯ ಬಿತ್ತಿ ಬೆಳೆದ ಗುಡಿಗಳೇ
ನಾಗದಂಚುಗಳೇ | ಶಿಖರದ ಚುಂಚುಗಳೆ
ಭರತಭುವಿಯ ಮಮತೆಯ ಮಗಳೆ || 3 ||
(ಹೂ ಹರೆಯದ ಹೊಂಗನಸುಗಳೇ – ಧಾಟಿಯಲ್ಲಿ)
ರಚನೆ : ಶ್ರೀ ಸೋಂದಾ ನಾರಾಯಣ ಭಟ್