ನಿಗ್ರಹಿಸೋ ಮನವ ನೀ ಯೋಗಿ
ನಿಗ್ರಹಿಸೋ ವಿಷಯವ ನೀ ಮಾಗಿ || ಪ ||
ಚಿತ್ತವೃತ್ತಿಯಲಿ ಇರುವುದು ಮೂರು
ಮನೋಬುದ್ಧಿ ಅಹಂಕಾರವೆನ್ನುವುದು
ಅನುಪಮ ವೈರಾಗ್ಯ ಸಹಜ ಅಭ್ಯಾಸದ
ನಿಗ್ರಹ ಸಾಧನೆ ಸಾಧ್ಯ ಸಂಯೋಗ || 1 ||
ಯೋಗವು ತರುವುದು ಶಾಂತಿಯ ಮನಸಿಗೆ
ಕ್ಲೇಶ ಕಳುಚುವುದು ಯೋಗ ಸಾಧಕಗೆ
ಪ್ರಾಣ ಪ್ರವಾಹವ ಧಾರಣ ಮಾಡಿ
ಕ್ರಮಗೊಳಿಸುವ ಅಷ್ಟಾಂಗದ ಹಾದಿ || 2 ||
ಅಂತರಾತ್ಮನ ಕಾಣಲು ಧ್ಯಾನ
ಆತ್ಮಸಾಕ್ಷಾತ್ಕಾರಕೆ ಸಾಧನ ಧ್ಯಾನ
ಯಮ ನಿಯಮಗಳೇ ಸಮರಸ ತಂತ್ರ
ಪ್ರಾಣಾಯಾಮ ಸ್ವರ್ಗಸಮಾನ || 3 ||
ಚಂಚಲ ಮನವು ದುಃಖಕೆ ಕಾರಣ
ಮನಪ್ರಶಮನಕೆ ಯೋಗವು ಕಾರಣ
ಇಡಿಯಾಗಿಸುವ ಯೋಗದ ಸಫಲತೆ
ಸಾಧಕ ಜೀಗೆ ಶಕ್ತಿ ಕ್ಷಮತೆ || 4 ||
ಜಗದೊಳೆಲ್ಲೆಡೆ ಕೀರ್ತಿ ಯೋಗಕೆ
ಶ್ರದ್ಧಾ ಸುಮನ ಯೋಗಿ ಪತಂಜಲಿಗೆ
ಅನುಪಮ ಉಪಕಾರ ಮಾನವ ಕುಲಕೆ
ಜಯ ಜಯಕಾರ ಭಾರತ ಮಾತೆಗೆ || 5 ||