ಯೋಗದ ಬೆಳಕಲಿ ಸಾಗೋಣ
ಸುಯೋಗಿಗಳಾಗಿ ಬದುಕೋಣ
ಯೋಗಾಚಾರ್ಯರ ಸ್ತುತಿಸೋಣ
ಪತಂಜಲಿ ಮುನಿಗಳ ನಮಿಸೋಣ || ಪ ||
ಅಷ್ಟಾಂಗ ಯೋಗದ ಆಲದ ಮರದಡಿ
ಅಷ್ಟಮದಗಳ ತ್ಯಜಿಸುತಲಿ
ಅನುದಿನ ಯಮ-ನಿಯಮಗಳೊಡಗೂಡಿ
ರಾಷ್ಟ್ರದ ಧ್ಯಾನವ ಮಾಡೋಣ || 1 ||
ನರನಾಡಿಗಳೆಲ್ಲವ ತುಂಬಿಹ ಉಸಿರಿಗೆ
ನವ ಚೈತನ್ಯವ ನೀಡುತಲೀ
ತನು-ಮನ-ಪ್ರಾಣಗಳೆಲ್ಲವ ನಾವು
ಭಾರತ ಮಾತೆಗೆ ನೀಡೋಣ || 2 ||
ಯೋಗದ ದಿನವಿದು ಸಂಕೇತ ಎನ್ನುತ
ಜಗದಗಲವು ಹಣತೆಯ ಹಚ್ಚೋಣ
ಅರಿವಿನ ಪ್ರತ್ಯಾಹಾರದ ಜೊತೆಯಲಿ
ನಾಡಿನ ಕೀರ್ತಿಯ ಮೆರೆಸೋಣ || 3 ||
ಸ್ವಾಸ್ಥ್ಯದ ಬದುಕಿಗೆ ಯೋಗವೆ ದೀವಿಗೆ
ಸಾಧನೆಯೊಂದೆ ದಾರಿಯು ಸಿದ್ಧಿಗೆ
ರಾಷ್ಟ್ರಪ್ರಜ್ಞೆಯ ಧಾರಣೆಯೊಂದಿಗೆ
ಅನುಪಮ ಸಮಾಧಿಗೆ ತೆರಳೋಣ || 4 ||