ಸಿಂಧು ಸಂಸ್ಕೃತಿಯಲ್ಲಿ

ಸಿಂಧು ಸಂಸ್ಕೃತಿಯಲ್ಲಿ ಸಿರಿ ಪರಂಪರೆಯಲ್ಲಿ
ಹಿಂದು ಹೆಸರಲಿ ನಾವು ಬಂದೆವಿಳೆಗೆ
ಸಂದ ಕಾಲವನೆಳೆದು ಇಂದು ಯಶ ಸಾಧಿಸಲು
ಬಂದಿಹುದು ಶುಭ ಸಮಯ ನಮ್ಮ ಬಳಿಗೆ || ಪ ||

ಒಡೆದು ಶಂಖಧ್ವನಿಯ ಗುಡುಗು ನೂರ್ಮಡಿಗೊಂಡು
ಸಿಡಿಸಿಡಿದು ಸೀಳಾಗಿ ಸ್ವೀಕರಿಪ ಮೊದಲೇ
ಬಡವ ಅಂತ್ಯಜರೆಂಬ ತಡೆಗೋಡೆಗಳು ಬೆಳೆದು
ದುಡುಕಿ ವಿಷನಾಗಗಳು ಫೂತ್ಕರಿಪ ಮೊದಲೇ
ಹುಡುಕಿ ಓರೋರ್‍ವರನು ನಿಜವಿಕಾಸಕೆ ತರಲು || 1 ||

ವಿಸ್ಮೃತಿಯ ಕರಿಮುಗಿಲು ಪ್ರಗತಿಪಥವನು ಕವಿದು
ಪಶ್ಚಿಮಕೆ ಸೋತವರ ಅನುಸರಿಸದೇ
ಆತ್ಮರತಿಯಲಿ ಮುಳುಗಿ ಆರ್ತರನು ಕಡೆಗಣಿಸಿ
ಆತ್ಮದುತ್ಥಾನದಲೇ ಮನ ಸೋಲದೇ
ಲೋಕಕಲ್ಯಾಣದಲಿ ಸಾರ್ಥಕತೆ ಸೃಷ್ಠಿಸಲು || 2 ||

ನಿಶೆಯ ವಿಭ್ರಮೆಗೊಳಿಸಿ ಉಷೆಯ ಉದ್ಯಮಗೊಳಿಸಿ
ಹೊಸದಿಗಂತದಿ ಹಿಂದು ಪ್ರಜ್ಞೆ ಬೆಳಗೆ
ಅರುಣಕದಿರಾವರಿಸಿ ಧೀ ಪ್ರಚೋದನೆಗೊಳಿಸಿ
ಅರ್ಘ್ಯವನು ಕಾದಿರ ಅಮೃತಘಳಿಗೆ
ಧ್ಯೇಯ ಸಾಧನೆ ವ್ರತಕೆ ಮನದಿ ಸಂಕಲ್ಪಿಸಲು || 3 ||

Leave a Reply

Your email address will not be published. Required fields are marked *