ಶೌರ್ಯ ಬಿತ್ತಿ ಬೆಳೆದ

ಶೌರ್ಯ ಬಿತ್ತಿ ಬೆಳೆದ ಧನ್ಯ ವಿಶ್ವವಂದ್ಯೆ ಭಾರತಮಾತೆ
ಕಾರ್ಯಶೀಲರಾಗುವಂತೆ ಹರಸು ನಮ್ಮನು
ಅರಿಗಳಿಗೆ ದುರ್ಗೆಯಾಗಿ ಆರ್ತರಳಲ ತೊಡೆದ ತಾಯಿ
ಧ್ಯೇಯ ಪಥದಿ ಸಾಗುವಂತೆ ಹರಸು ನಮ್ಮನು || ಪ ||

ವರ್ತಮಾನವಳಿಸಿಕೊಂಡು ಶೈತ್ಯ ಧಗೆಗೆ ಒಗ್ಗಿಕೊಂಡು
ಹೊರಗೂ ಒಳಗೂ ಕಾಯುತಿರುವ ವೀರ ಯೋಧರು
ಪೊರೆದು ಕಾಯ್ವ ವೀರರನ್ನು ಹೆಮ್ಮೆಯಿಂದ ವಿರತ ಸ್ಮರಿಸಿ
ಹೃದಯವಂತರಾಗುವಂತೆ ಹರಸು ನಮ್ಮನು || 1 ||

ಒಡಕಿನಿಂದ ತೊಡಕು ಸಹಜ ಐಕ್ಯಮತ್ಯದಿಂದ ವಿಜಯ
ಕೂಡಿ ಬಾಳ್ವ ಪರಿಯ ಕಲಿಸಿ ಹರಸು ನಮ್ಮನು
ಸಗ್ಗ ಸಿರಿಯ ಗೆಲುವು ನಿನದು ಸಕಲ ವಿದ್ಯೆ ಮೇರು ನೀನು
ಸೊಬಗನರಿತು ಕೆಡಿಸದಂತೆ ಹರಸು ನಮ್ಮನು || 2 ||

ಕಾಯ ವಾಚ ಮನಸಿನಿಂದ ಶುದ್ಧರಾಗಿ ಶ್ರದ್ಧೆಯಿಂದ
ನಿನ್ನ ಮೊಗದಿ ನಲಿವ ತರಲು ಹರಸು ನಮ್ಮನು
ಸೂರ್ಯ ಚಂದ್ರರಿರುವ ವರೆಗೂ ಮೆರೆಯುತಿರಲಿ ಕೀರ್ತಿ ಧ್ವಜವು
ಗುರಿಯ ತೋರಲೆಂದು ತಾಯೆ ಹರಸು ನಮ್ಮನು || 3 ||

Leave a Reply

Your email address will not be published. Required fields are marked *