ಮನೆಯ ಹೊರಗಡೆ ಅಲ್ಲ

ಮನೆಯ ಹೊರಗಡೆ ಅಲ್ಲ,ಮನದ ಹೊರಗೂ ಅಲ್ಲ
ಒಳಗಡೆಗೆ ಆಳದೆಡೆ ನಾನಿಳಿಯಬೇಕು
ಒಳಗಿಳಿದು ಕೆಳಗಿಳಿದು ಒಳಗಿನರಗಿಳಿ ನುಡಿವ
ಒಲುಮೆಯ ಸವಿನುಡಿಯ ಕಿವಿಗಿಳಿಸಬೇಕು || ಪ ||

ಹಿಂದು ಮುಂದರಿಯದಲೆ ಅಲೆಯುತಿಹ ಇಂದ್ರಿಯವ
ತುಡುಗುತನವನು ಬಿಡಿಸಿ ಹಿಂದೆಳೆಯಬೇಕು
ಹಿಡಿವಡೆಯಲೆಡೆಗೊಡದೆ ಚಂದವರಸುವ ಮನವ
ಚಂದದಲಿ ಅನುನಯಿಸಿ ಕುಳ್ಳಿರಿಸಬೇಕು || 1 ||

ಕಣ್ಣಾಲಿಗಳ ಮುಚ್ಚಿ ಒಳಗಣ್ಣುಗಳ ತೆರೆದು
ಆಂತರಂಗದ ಯಾತ್ರೆ ತೊಡಗಬೇಕು
ಸರ್ವಾಂತರ್ಯಾಮಿ ಆ ಅನಂತ ಚೇತನದರಿವು,
ಆ ಚಿರಂತನ ಸತ್ಯ ಕಣ್ತುಂಬಬೇಕು || 2 ||

ಒಳ ಹೊರಗಿನಲೂ ಹರಿವ ಚೈತನ್ಯ ತಾನೊಂದೇ
ಸ್ಮೃತಿವಾಕ್ಯದನುಭೂತಿ ನನಗಾಗಬೇಕು
ಆತ್ಮ ಪ‌ರಮಾತ್ಮರೊಳು ನಡುವಿರುವ ಭಿತ್ತಿಯನು
ಕಿತ್ತೊಗೆದು ಹಿರಿದರಲಿ ಒಂದಾಗಬೇಕು || 3 ||

ಮಣ್ಣ ಕುಡಿಕೆಯು ಒಡೆದು ಮಣ್ಣ ಸೇರುವ ತೆರದಿ
ನನ್ನ ಅಹಂಕಾರವನೇ ನಾನೊಡೆಯಬೇಕು
ಮೃಣ್ಮಯವು ಈ ಕಾಯ ಮಣ್ಣೊಡಲ ಸೇರುತಲಿ
ಚಿನ್ಮಯನ ಶ್ರೀಪಾದ ನಾ ಸೇರಬೇಕು || 4 ||

Leave a Reply

Your email address will not be published. Required fields are marked *