ಭಾರತ ವರ್ಷದ ಭವ್ಯ ನವೋದಯ
ಬಯಸಿದೆ ಶಕ್ತಿಯ ಸಂಗಮವ
ದಾರಿಯ ತೋರಿದ ಧೀರ ಪರಂಪರೆ
ಜಡತೆಯ ನೀಗಿದ ಜಂಗಮವ || ಪ ||
ಶ್ರದ್ಧೆಯ ಬದಲಿಪ ಬುದ್ಧಿ ಭೇದಗಳ
ಸದ್ದಿಲ್ಲದ ಹುನ್ನಾರವಿದೆ
ಇದ್ದುದನೆಲ್ಲವ ಅಲ್ಲಗಳೆವ ಹಸಿ
ಸಿದ್ಧಾಂತದ ಸಂಘರ್ಷವಿದೆ || 1 ||
ಗಡಿಗಳ ಗುಡಿಗಳ ಒಡೆವಾಯುಧಗಳ
ಮುರಿದಿಕ್ಕುವ ಛಲ ಮೂಡುತಿದೆ
ಕಡಲಿನ ತಡಿ ಹಿಮಶಿಖರದ ನಡುವಿನ
ಧರೆಯೊಡೆತನ ದೃಢವಾಗುತಿದೆ || 2 ||
ಸಾವಿರ ಕೈಗಳು ಒಗ್ಗೂಡಿಹ ಬಲ
ಭಾವೈಕ್ಯದ ನೆಲೆಯಾಗಲಿದೆ
ಸಾವನು ಜಯಿಸಿದ ಭೀಮ ಶಕ್ತಿ ನಿಜ
ದೈವದ ಒಲುಮೆಯ ಗಳಿಸಲಿದೆ || 3 ||
ಜ್ಞಾನ ಶೀಲ ಸಂಘಟನೆ ಸಮುನ್ನತಿ
ಬಂಧುತ್ವದಿ ಜಗ ಜಯಿಸುವೆವು
ಕಾಲನ ಮಣಿಸುವ ಕೋದಂಡದ ಪಡೆ
ನಾಳೆಗಳನು ನಾವಾಳುವೆವು || 4 ||