ಗತ ಇತಿಹಾಸದ ಗಡಿಗಳ ಮೀರಿದ ವೀರನು ಗುಣಶೇಖರನು
ಹಿಂದವಿ ಶಕ್ತಿಯ ಮಾತೆಯ ಮಡಿಲಿನ ಪುರುಷಸಿಂಹನು ಅಗ್ರಜನು || ಪ ||
ಎಳೆಯ ಮನವದು ಪರರನು ಒಪ್ಪದೆ ತನ್ನದೆ ಹೆಜ್ಜೆಯ ಮೆಟ್ಟುವನು
ಮಾವಳ ಮನದಲಿ ದೇಶಭಕ್ತಿಯ ತುಂಬುತ ಕೋಟೆಯ ಗೆದ್ದವನು
ಕತ್ತಲೆ ತುಂಬಿಹ ಭರತ ಕುಲದಲಿ ಧ್ಯೇಯದ ದೀಪವೆ ಆದವನು
ಸಮರ ಚತುರನು ಪ್ರಜಾಪ್ರಿಯನು ಪ್ರಚಂಡ ಶಿವನಿವನು || 1 ||
ಜೀಜಾಬಾಯಿಯ ಖಡ್ಗವವನು ಕನಸಿಗೆ ನನಸಾದವನು
ಮೊಗಲ ಪಾಪಿಯ ಸೊಕ್ಕ ಮುರಿದ ಧೀರ ಕುಲ ತಿಲಕನು
ರಾಷ್ಟ್ರದೇವನ ಧನುಸ್ಸಿಗಾಗಿ ವೀರರ ಶರವನಿತ್ತ ಜಿತೇಂದ್ರನು
ಧರ್ಮದಾ ಪ್ರಭೆ ಎಲ್ಲೆಡೆಯು ಹರಡಿದ ಅಮರ ಶಿವಕಿರಣನು || 2 ||
ಅಭಯ ಜೀವನ ನೀಡಿ ಜನಕೆ ನೆಮ್ಮದಿಯ ಉಸಿರನಿತ್ತವನು
ಆರು ದಿಕ್ಕಲಿ ಅರಿಯ ಮುರಿದು ರಾಮರಾಜ್ಯವನಿತ್ತ ಭರತನು
ಸ್ತ್ರೀ ಕುಲವ ಕಲಶವಾಗಿಸಿ ಹಿಂದು ಸಂಸ್ಕೃತಿಯ ಮೆರೆಸಿದವನು
ಶ್ರೇಷ್ಠ ಭಾರತ ನಿತ್ಯದರ್ಚನೆಗೆ ಗೈದ ಶಿವಾರ್ಪಣವನು || 3 ||
ಇತಿಹಾಸದ ಮಿತಿಗೆ ಸಿಲುಕದ ಶೌರ್ಯ ಪರಾಕ್ರಮಿ ಶಿವರಾಯನು
ಏಳುಬೀಳಿನ ಚರಿತೆಯಲಿ ಗುಣಗಣಿಯಾದ ಅಗಣಿತನು
ಹಿಂದು ರಾಷ್ಟ್ರದ ಘನತೆ ಗಾಯಕೆ ಪದಗಳಾದ ಶಿವಕಂಠನು
ಎದೆಯ ಹೃದಯದಿ ಭಕ್ತಿ ಅನುದಿನವು ಉಕ್ಕಲು ಶಿವಗಂಗೆಯಾದವನು || 4 ||