ಆಕಾಶಕೆದ್ದುನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ ಮುತ್ತನಿಡುವ ಪೆರ್ದೆರೆಗಳ ಗಾನದಲ್ಲಿ
ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರ ಘೋಷವೇಳುವಲ್ಲಿ
ಕಣ್ಣು ಬೇರೆ, ನೋಟ ಒಂದು ನಾವು ಭಾರತೀಯರು || ಪ ||
ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ ಯೋಧರೆತ್ತಿಹಿಡಿದ ನಮ್ಮ ಧ್ವಜದ ನೆರಳಿನಲ್ಲಿ
ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ
ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
ಭಾಷೆ ಬೇರೆ ಭಾವವೊಂದು ನಾವು ಭಾರತೀಯ || 1 ||
ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ
ನಮ್ಮ ಕಷ್ಟದಲ್ಲು ನೆರೆಗೆ ನೆರಳನೀವ ಕರುಣೆಯಲ್ಲಿ
ದಾರಿ ಬಳಸಿ ಏರುವಲ್ಲಿ ಬಿರುಗಾಳೆಯೆ ಮೊಳಗುವಲ್ಲಿ
ನಮ್ಮ ಗುರಿಯ ಬೆಳಕಿನಡೆಗೆ ನಡೆವ ಧೀರ ಪಯಣದಲ್ಲಿ
ಎಲ್ಲೇ ಇರಲಿ ನಾವು ಒಂದು ನಾವು ಭಾರತೀಯರು || 2 ||