ವಿಶ್ವಸಂತತಿ ಎಲ್ಲ ನಿನ್ನ ಪುಣ್ಯೋದರದ
ಹಸುಗೂಸುಗಳು ಎಂದು ಹಾಲುಣಿಸಿದೆ
ಒಂದೇ ತೊಟ್ಟಿಲೊಳಿಟ್ಟು ತೂಗಿ ಶೋಭನವಾಗಿ
ಪ್ರೇಮ ಸಂಗೀತದೊಳು ಮೈಮರೆಸಿದೆ || ಪ ||
ಸೂರ್ಯಚಂದ್ರರಿಗೆಲ್ಲ ಪ್ರಭೆಯನಿತು ಇರಲಿಲ್ಲ
ನಿನ್ನ ಕೀರ್ತಿಯ ಜ್ಯೋತಿ ಪ್ರಜ್ವಲಿಸಿತು
ಮೇಘಮಂಡಲವೇರಿ ವಿಜಯ ವೀರಧ್ವಜವು
ಸ್ವಾತಂತ್ರ್ಯ ಸಂಭ್ರಮದಿ ಸಂಚರಿಸಿತು || 1 ||
ಅಪಮಾನಗಳನಿಂತು ಶತಮಾನ ಸಹಿಸಿರಲು
ಶಕ್ತಿ ಭೈರವಿ ಜನನಿ ತಾಳ್ಮೆಯುಂಟೆ?
ಕ್ಷಮೆಯ ಮೀರದೆ ನೋವು ಶಕ್ತಿಪುತ್ರರು ನಾವು
ಹರಸಿಬಿಡು ತೆರಳುವೆವು ತಡೆವರುಂಟೆ? || 2 ||
ಒಮ್ಮತದ ಏಕಪಂಥವ ಹಿಡಿದು ಸಾಗುವೆವು
ಕ್ಷಮಿಸಮ್ಮ ಸೋದರರು ಬಡಿದಾಡೆವು
ಹೊಸ ಜಗದ ನಿರ್ಮಾಣದೀ ಸಂಧಿಕಾಲದಲಿ
ನಿನ್ನ ಘನತೆಗೆ ಕೊರತೆಯಾಗಬಿಡೆವು || 3 ||
ಹಸಿರುಡಿಗೆ ಪಸೆದುಟ್ಟು ಸಿರಿಮುಡಿಗೆ ಹೂತೊಟ್ಟು
ಭುವನೇಶ್ವರಿಯೇ, ನೀನು ಮೆರೆಯಬೇಕು
ಶುಭದಿನದ ಹೊಸಬೆಳಕ ಆನಂದ ಶೋಭೆಯಲಿ
ನಿನ್ನ ಶ್ರೀಮುಖ ಒಮ್ಮೆ ನೋಡಬೇಕು || 4 ||