ವಿಘ್ನ ವಿರೋಧದ ಹೆಡೆಯನು ಮೆಟ್ಟಿ

ವಿಘ್ನ ವಿರೋಧದ ಹೆಡೆಯನು ಮೆಟ್ಟಿ
ನಾಡನು ಕಟ್ಟಲು ಬನ್ನಿ
ಕಲ್ಲು ಮುಳ್ಳುಗಳ ಪಥದಲಿ ಚಲಿಸಿ
ಗುರಿಯನು ಮುಟ್ಟಲು ಬನ್ನಿ || ಪ ||

ಗತ ಇತಿಹಾಸದ ಪುಟ ಪುಟಗಳಲಿ
ಅಡಗಿದೆ ನೀತಿಯ ಪಾಠ
ಶತ ಶತಮಾನದ ಸೋಲುಗೆಲುವುಗಳ
ಏಳು-ಬೀಳುಗಳ ಆಟ
ಮನದಲಿ ಮನೆಮಾಡಿದ ಭಯ ಆಂಜಿಕೆ ದೂರಕೆ ಅಟ್ಟಲು ಬನ್ನಿ || 1 ||

ಮೈ ಮರೆವಿನ ಫಲ ಘೋರ ಭೀಕರ
ರಾಷ್ಟ್ರ ವಿನಾಶಕೆ ದಾರಿ
ಏಕತೆಯೊಂದೆ ತಾರಕ ಮಂತ್ರ
ಎಂಬುದನೆಲ್ಲೆಡೆ ಸಾರಿ
ಭೇದದ ಭಿತ್ತಿಯ ಉರುಳಿಸಿ ಹೃದಯದ ಕದವನು ತಟ್ಟಲು ಬನ್ನಿ || 2 ||

ಎಲ್ಲೆಡೆ ಬೀಸಿದೆ ಮುಕ್ತತೆ ಸೋಗಲಿ
ಸ್ವೈರಾಚಾರದ ಗಾಳಿ
ನಾಡ ಪರಂಪರೆ ಮೌಲ್ಯದ ಮೇಲೆ
ಪಶ್ಚಿಮ ದಿಕ್ಕಿನ ದಾಳಿ
ಶರಣಾಗದೆ ಮತಿಹೀನ ವಿಚಾರಕೆ ಕಿಚ್ಚನು ಹಚ್ಚಲು ಬನ್ನಿ || 3 ||

Leave a Reply

Your email address will not be published. Required fields are marked *

*

code