ವೀರ ಘೋಷಣೆ ವೀರಘರ್ಜನೆ

ವೀರ ಘೋಷಣೆ ವೀರಘರ್ಜನೆ ಗೈಯ್ಯೆ ವಿಜಯೋಪಾಸನೆ
ಶಕ್ತಿ ಇಲ್ಲದೆ ಮುಕ್ತಿಯಿಲ್ಲವು ಇದು ಚರಿತ್ರೆಯ ಬೋಧನೆ || ಪ ||

ಒಬ್ಬರಾಗುತ ಒಬ್ಬದೇವರು ಹುಟ್ಟಿ ಬಂದರು ಬಂದರು
ಸಾಧುಪುರುಷರು ವೀರಪುರುಷರು ಬಂದು ಹೋದರು ಹೋದರು
ಗೊಡ್ಡು ಮನದಲಿ ಅಡ್ಡಬಿದ್ದೆವು ನಮ್ಮಡಿಯ ಹಿಂದಿಟ್ಟೆವು
ಹೂವುಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸಿ ಬಿಟ್ಟೆವು || 1 ||

ಉದ್ಧರೇದಾತ್ಮನಾತ್ಮಾನಮ್ ನಾವೇ ಪಠಿಸಿದುದಲ್ಲವೇ?
ಕೋವಿ ಕತ್ತಿಯನಿಟ್ಟು ಸುಮ್ಮನೆ ನಾವೆ ಪೂಜಿಸಲಿಲ್ಲವೇ?
ಪೂಜೆ ಏತಕೆ ಪಠನವೇತಕೆ ಗೈದೆವೆಂಬುದ ಬಲ್ಲೆವೇ?
ಶಸ್ತ್ರವೇತಕೆ ಶಾಸ್ತ್ರವೇತಕೆ ಎಂಬುದನು ಮರೆತಿಲ್ಲವೇ? || 2 ||

ಮೂರು ಸಾಗರ ನೂರು ಮಂದಿರ ದೈವಸಾಸಿರವಿದ್ದರೆ
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ
ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ
ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತ್ತಿದ್ದರೆ! || 3 ||

ಮಾತೃಭೂಮಿಯ ಮಕ್ಕಳಾದರೆ ಈಗ ನಿದ್ರಿಸಲೊಲ್ಲಿರಿ
ಮೈಯ್ಯ ರಕ್ತವು ಶುದ್ಧವಿದ್ದರೆ ಈಗ ತೋರಿಸಬಲ್ಲಿರಿ
ಅಡಿಯ ಮುಂದಿಡೆ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿ
ಕಡನಾಳಿರಿ ನಭವನಳೆಯಿರಿ ಯಂತ್ರತಂತ್ರವ ನಿರ್ಮಿಸಿ || 4 ||

Leave a Reply

Your email address will not be published. Required fields are marked *