ವರುಷ ಸಾಸಿರ ಮೊದಲು

ವರುಷ ಸಾಸಿರ ಮೊದಲು || ಪ ||

ಹರುಷ ಗುಪ್ತರ ರಥ ಪದಾತಿಗಳ
ದಿವ್ಯಾಭರಣಗಳ ಸ್ವರ್ಣಯುಗ ಮುಗಿದು
ಹಗಲಿಳಿದು ಮುಗಿಲೋಳಿಯೊಲು ಹಗೆ ಕವಿದು
ಮಗಧ ದೇಶದ ನಗುವ ನಂದನವು
ನೀರಿರದ ನೆರಳಿರದ ಮಸಣವಾಗುತಲಂದು
ನಿನಗಾಯ್ತು ವನವಾಸ ಓ, ಸ್ವಾತಂತ್ರ್ಯ ಪುರುಷ !
ಮರೆಯಾಯ್ತು ರಾಮನಾಳಿದ ಭಾರತದ ಹರುಷ,
ಬರಿದಾಯ್ತು ಆದರ್ಶವೆನಿಸಿದೀ ಭರತವರುಷ || 1 ||

ವಿಜಯನಗರದೊಳೊಮ್ಮೆ ನೀನಾದೆ ಅತಿಥಿ
ರಜಪೂತಾನದಿ ಕಳೆದೆ ಹಲಕೆಲವು ದಿನವ
ಕಡಲತೀರದ ಪಡುವನಾಡಿನಲಿ
ಕೊಂಕಣದ ಕಾಡಿನಲಿ
ಶಿವನ ಗೌರವದ ಸಹವಾಸದಲಿ ಮೆರೆದೆ;
ಬೈರಾಗಿ ಬಂದಾ, ಗೋವಿಂದರನು ಸ್ಪರ್ಶಿಸಿದೆ
ಮೂಲೆ ಮೂಲೆಯನಲೆದು
ಅಲ್ಲೊಮ್ಮೆ ಇಲ್ಲೊಮ್ಮೆ ಕಿಡಿಯ ಹಾರಿಸಿದೆ
ಸಾಹಸದ ಹೃದಯಗಳ ಗೆಳೆತನವ ಬೆಳೆಸಿ
ಆಗೊಮ್ಮೆ ಈಗೊಮ್ಮೆ ಬೆಳಕೆತ್ತಿ ತೋರಿಸಿದೆ !
ಕಳೆದ ಶತಮಾನದಲಿ ಝಾನ್ಸಿ, ಕಿತ್ತೂರಿನಲಿ
ರಣಗೀತೆ ಹಾಡಿಸಿದೆ ಖಡ್ಗಗಳನಾಡಿಸಿದೆ
ತಾಂತ್ಯ ನಾನಾ ಕುವರಸಿಂಹರನೇಳಿಸಿದೆ
ರಾಮ ಅರವಿಂದ ಶ್ರದ್ಧಾನಂದರದು ಕೈಹಿಡಿದೆ
ಕ್ರಾಂತಿವೀರರ ತಟ್ಟಿ ಕಣಕೆ ಕಳುಹಿದೆ ಹರಿಸಿ ! || 2 ||

ಓ, ಸ್ವಾತಂತ್ರ್ಯ ಪುರುಷ !
ಇಲ್ಲ, ಬಂದಿಲ್ಲವಿನ್ನೂ ಭಾರತಕೆ ಹರುಷ !
ಬುದ್ಧಿದಾಸ್ಯದ ಬಲವು ಮೇಲೆದ್ದು
ನಿನ್ನದೇ ಹೆಸರಿನಲಿ, ತನ್ನದೇ ಕೆಸರಿನಲಿ
ಭಾರತೀಯ ತೋಳುಗಳ ತುಂಡರಿಸಿ
ಮಾಡಬಾರದುದನ್ನೆ ನೋಡಬಾರದುದನ್ನೆ
ಸಾಧಿಸಿದ ನೆತ್ತರಿನ ನದಿ ಹರಿದ ದುರ್ದಿನದಿ
ನಾಚಿದೆಯೊ ? ನಡುಗಿದೆಯೊ ? ಎಲ್ಲಡಗಿದೆಯೊ ?
ಬಾ, ಕರೆಯುತಿಹೆವು !
ಜನಮನವ ಬೆಸೆದು ಹರಿದ ನಾಡನು ಹೊಲಿದು
ಸ್ವೀಕರಿಸು ಸಿಂಹಾಸನವ ಸ್ವಾತಂತ್ರ್ಯ ದೇವ !
ಪರಿಹರಿಸು ನಮ್ಮೆದೆಯ ನೋವ ! || 3 ||

Leave a Reply

Your email address will not be published. Required fields are marked *

*

code