ವರ್ಧಿಸಲಿ ವೇಗದಲಿ

ವರ್ಧಿಸಲಿ ವೇಗದಲಿ ಭರತಭೂವಲಯದಾರಾಧನೆ
ಯಶಭರಿತ ಧ್ಯೇಯರತ ಶತಕೃತ ಮಹಾಪ್ರಲಯಸಾಧನೆ || ಪ ||

ದೀರ್ಘ ಕಾಳಿಮೆ ಕಳೆದು ಧ್ಯೇಯಭಾಸ್ಕರನೊಲಿದು ಸಾಧಕರದೀ ಯಾತ್ರೆ
ಫಲಿಸುವನಕ
ಬಲಿದಾನ ಬಲದಾನ ಜ್ಞಾನಗಳ ಬಸಿರಿಂದ ರಾಷ್ಟ್ರರವಿ ಪುನರುದಿಸಿ
ಬರುವ ತನಕ || 1 ||

ದೇಶ ಧರ್ಮದ ಧ್ವಜದ ಸನ್ಮಾರ್ಗದರ್ಶನದ ಪ್ರಭೆಯ ಸ್ವೀಕರಿಸಿ
ಸೌಭಾಗ್ಯ ತರಲು
ಖಳದನುಜ ರಾಜ್ಯದಲಿ ಅರುಣಜಲದಾಜ್ಯದಲಿ ಧ್ಯೇಯದೀಪವನಿರಿಸಿ
ಉರಿಸುತಿರಲು || 2 ||

ಹೃದಯ ಹೃದಯದ ಬಿಂದು ಒಂದಾಗುತೈತಂದು ಪ್ರಬಲ ಸಿಂಧೂ
ರೂಪ ಧರಿಸುವಂತೆ
ಶಸ್ತ್ರಾಸ್ತ್ರ ಸ್ಪರ್ಧೆಯಲಿ ನಿಯತಿಯಾಣತಿ ಮರೆತು ಕೆಳಗಿಳಿದ ಜಗದ ಕಣ್
ತೆರೆಸುವಂತೆ || 3 ||

ಶಸ್ತ್ರಧಾರಣಿಯಾಗಿ ಶೋಕಹಾರಿಣಿಯಾಗಿ ಸಸ್ಯಶ್ಯಾಮಲ ಧರಣಿ ಏಳುವಂತೆ
ಸೌಮ್ಯಕೋಮಲ ಪೃಥಿವಿ ಸುತರ ತಪದಧಿದೇವಿ ಸಬಲ ದುರ್ಗಾರೂಪ
ತಾಳುವಂತೆ || 4 ||

ದನುಜದಹನದ ಧರಾವಲಯದಧಿದೇವತೆಯ ದುರುಳದಮನದ ದಾಹ
ಕೆರಳುವಂತೆ
ದಿವ್ಯ ಜಂಬೂವಸುಧೆ ಚೈತ್ರದುದಯವ ಕಾದು ಚೇತನದ ಜೀವಸುಧೆ
ಚೆಲ್ಲುವಂತೆ || 5 ||

Leave a Reply

Your email address will not be published. Required fields are marked *

*

code