ತಾಯ್ನೆಲದ ಸದ್ಗುಣಗಳೇ ನನ್ನಲ್ಲಿ ಚಿಗುರಬನ್ನಿ
ಆಂತರ್ಯದಾಳದಿಂದ ಉದ್ಗಮಿಸಿ ಜೀವ ತನ್ನಿ || ಪ ||
ಋಷಿ ದರ್ಶನವನು ಪಡೆದು ರಸಸ್ಪರ್ಶವನ್ನು ಕಡೆದು
ಹೊಸ ಸೃಷ್ಟಿಗೊಪ್ಪುವಂತೆ ನನ್ನಲ್ಲಿ ಚಿಗುರ ಬನ್ನಿ || 1 ||
ಶ್ರೀರಾಮಕೃಷ್ಣರಿಂದ ಬಸವಣ್ಣ ಬುದ್ಧರಿಂದ
ಇತಿಹಾಸದೊಳಗಿನಿಂದ ನನ್ನಲ್ಲಿ ಚಿಗುರ ಬನ್ನಿ || 2 ||
ಗುರುಭಕ್ತಿ ಎನಗೆ ಬರಲಿ ಸತ್ಯದೊಳು ಶ್ರದ್ಧೆಯಿರಲಿ
ಸದ್ವಿಚಾರಗಳ ಸೆಲೆಯೇ ನನ್ನಲ್ಲಿ ಚಿಗುರ ಬನ್ನಿ || 3 ||
ನುಡಿತಪ್ಪದಂತೆ ನಡೆವ ಅಡಿ ತಪ್ಪದಂತೆ ಬೆಳೆವ
ಸಿರಿವಂತ ಚಿಂತನೆಗಳೇ ನನ್ನಲ್ಲಿ ಚಿಗುರ ಬನ್ನಿ || 4 ||
ಜಗಕೆಲ್ಲ ಜ್ಞಾನ ಕೊಡುವ ತನ್ನಂತೆ ಎಲ್ಲರೆನುವ
ಹಿಂದು ವಿಶಾಲತೆಗಳೇ ನನ್ನಲ್ಲಿ ಚಿಗುರ ಬನ್ನಿ || 5 ||