ತಾಯೇ ವಂದಿಸುವೆ (ವಂದೇ ಮಾತರಂ ಗೀತೆಯ ಭಾವಾನುವಾದ)

ತಾಯೇ ವಂದಿಸುವೆ

ಜಲಭರಿತೆ ಫಲಭರಿತೆ
ತೆಂಕಣದ ತಂಬೆಲರ ಸರಿತೆ
ಸೊಂಪಿಡಿದ ಪೈರು ಪಚ್ಚೆಯ ತವರ್ಮನೆಯೆ
ಹೇ ತಾಯೆ !

ಬೆಳ್ದಿಂಗಳಲಿ ಮಿಂದು ಮಿರುಗುವಿರುಳನುಟ್ಟವಳೆ
ಹೂ ಚಿಗುರು ಮುಡಿದ ತರುಲತೆಗಳನೆ ತೊಟ್ಟವಳೆ
ಇನಿನಗೆಯ ಜೇನ್‍ದನಿಯ
ಸುಖದಾತೆ ವರದಾತೆ
ಹೇ ಮಾತೆ!

ಕಂಠಕೋಟಿಯ ಸಿಂಹಗರ್ಜನೆ ಸಿಡಿಸಿ
ಬಾಹುಕೋಟಿಯ ಶಸ್ತ್ರಚಾಲನೆ ನಡೆಸಿ
ರೌದ್ರರೂಪವ ತಳೆವ ಭೈರವಿಯೆ
ನೀನು ಅಬಲೆಯೆ ತಾಯೆ ?
ಸರ್ವಬಲ ಸಂಪನ್ನೆ
ಶರಣು ಅಭಯಾವರಣೆ
ವೈರಿಕುಲಧ್ವಂಸಿನಿಯೆ, ತಾಯೆ !

ನೀ ವಿದ್ಯೆ ನೀ ಧರ್ಮ
ನೀ ಹೃದಯ ನೀನಾತ್ಮ
ಒಡಲೊಳಲಾಡುವ ಪ್ರಾಣ ನೀನೆ
ಬಾಹುಗಳ ಸ್ಫುರಿಸುತಿಹ ಶಕ್ತಿ
ಹೃದಯಗಳ ಸ್ಪಂದಿಸಿಹ ಭಕ್ತಿ
ಗುಡಿಗುಡಿಯ ಗರ್ಭದಲಿ ನಿಂದು
ಪೂಜೆಗೊಳುತಿಹ ಮೂರ್ತಿ ನೀನೆ !

ನೀ ದುರ್ಗೆ ಈರೈದು ಕೈದುಗಳನಾಡಿಸುವೆ
ನೀ ಕಮಲೆ ಕಮಲದಲದಂಗಣದಿ ಕ್ರೀಡಿಸುವೆ
ವಾಣಿ, ವಿದ್ಯಾಸುಧೆಯನೂಡುತಿಹೆ
ನಿನಗಿದೋ ಪೊಡಮಡುವೆ
ಶತನಮನ ಸಿರಿಯೊಡತಿ
ಪರಿಶುದ್ಧೆ ಎಣೆರಹಿತೆ
ಜಲಭರಿತೆ ಫಲಭರಿತೆ ಓ ಮಾತೆ
ವಂದಿಸುವೆ ತಾಯೆ !

ಶ್ಯಾಮಲೆ ಸರಳೆ
ಸುಸ್ಮಿತೆ ಸಾಲಂಕೃತೆ
ಸಕಲ ಸಂಪನ್ಮೂಲೆ
ಸರ್ವಸಮೃದ್ಧಿಯಾಗರಳೆ
ತಾಯೇ !

Leave a Reply

Your email address will not be published. Required fields are marked *

*

code