ತವಪದಕೆ ಕೋಟಿ ನಮನ ಉದಿಸಿ ಬಾರೋ ಮಾಧವ || ಪ ||
ಶುದ್ಧ ಹೃದಯ ಮುಗ್ಧ ಮನದ ಓ ಪ್ರಭುದ್ಧ ಮಾನವ
ಭರತಸುತರ ಜಡತೆ ನೀಗಲುದಿಸಿ ಬಂದ ಮಾಧವ
ದುಗ್ಧ ಧವಳ ಹಿಮದಗಿರಿಯ ಉನ್ನತಿಯನು ಮೆರೆದವ
ದಗ್ಧ ಮನಕೆ ತಂಪನೆರಚಿ ಧ್ಯೇಯ ಧಾರೆ ಎರೆದವ || 1 ||
ಮೇರುಗಿರಿಯ ಮಾರ್ಗವೆಂದು ಕಂಟಕಮಯ ದುರ್ಗಮ
ಅವನು ತೋರ್ದ ಪಥದಿ ನಡೆಯೆ ಸಾಧ್ಯವಿಹುದು ವಿಕ್ರಮ
ಧ್ಯೇಯನಿಷ್ಠೆ ವೀರವ್ರತಕೆ ಜ್ಞಾನಗಂಗೆ ಸಂಗಮ
ಶಕ್ತಿಶೀಲ ಜತೆಗೆ ಸೇರೆ ಮೂಡಿಬಂತು ಸಂಭ್ರಮ || 2 ||
ಅಸೂಯೆ ದ್ವೇಷ ಕ್ಲೇಶದಿಂದ ಉಗ್ರವಾಯ್ತು ಶಾಸನ
ರೋಷದಿಂದ ಕೆರಳಿ ಕನಲಿ ನಿಂತನಾ ಹುತಾಶನ
ಅವನ ಸಂಗವಾಡಿ ಸಂಘವಾಯ್ತು ತಪ್ತಕಾಂಚನ
ತಮವು ನೀಗಿ ಜಗವ ಬೆಳೆಗಿ ಗೈದೆ ಸತ್ಯ ದರ್ಶನ || 3 ||
ದಲಿತನಿವನು ಪತಿತನಿವನು ಇವನು ದಕ್ಷಿಣೋತ್ತರ
ಭೇದದಿಂದ ನಡುಗುತಿರಲು ಭರತಮಾತೆ ಥರಥರ
ದಿಕ್ತಟದಿಂ ಮೊಳಗಿ ಬಂತು ದಿಟ್ಟತನದ ಉತ್ತರ
ಹಿಂದುವೆಂದು ಪತಿತನಲ್ಲ ಐಕ್ಯಮಂತ್ರ ಬಿತ್ತರ || 4 ||