ಸ್ವಾರ್ಥ ದ್ವೇಷ ನಿರಾಸೆ ಜಾಡ್ಯವ
ತೊರೆದು ಮೇಲೇಳ್ ಸೋದರ |
ಪ್ರೀತಿ ಗೌರವ ತ್ಯಾಗದಿಂ ಕ –
ಟ್ಟೋಣ ಭಾರತ ಮಂದಿರ || ಪ ||
ಗಾಳಿ ನೀರು ಮಣ್ಣು ಮರಕೆ
ನಮ್ಮ ಬೆಳೆಸಿದ ಪ್ರಕೃತಿಗೆ |
ಏನ ಕೊಟ್ಟೆವು ತಿರುಗಿ ನಾವು
ತ್ಯಾಜ್ಯ ಮಲಿನತೆ ವಿಕೃತಿಯ || 1 ||
ಸತ್ಯ ಧರ್ಮ ನ್ಯಾಯ ನೀತಿ
ತ್ಯಾಗ ನಿಷ್ಠೆಯ ಕಲಿಯದೆ |
ಶೌರ್ಯ ಸಾಹಸ ಧ್ಯೇಯ ಮೆರೆಯದ
ಬದುಕು ತರವೇ ಬಾಳದೇ || 2 ||
ಜನ್ಮಭೂಮಿಯ ಋಣವ ತೀರಿಸೆ
ತನುಮನಧನಗಳರ್ಪಿಸಿ
ಜನುಮ ಸಾರ್ಥವೆನಿಸುವಾ
ಧನ್ಯತೆಯನು ಹೊಂದುವಾ || 3 ||