ಸುತ್ತಮುತ್ತಲು ಅಂಧಕಾರ
ಉರಿಯುತಿತ್ತು ಹಣತೆಯೊಂದು
ಬೆಳಕು ಹೊಮ್ಮಿತು ತಮವು ಅಳಿಯಿತು
ಪುಳಕಗೊಂಡನು ಹಿಂದು ಹಿಂದು || ಪ ||
ಬರದ ಬೇಗೆಗೆ ಭುವಿಯ ಬೆಂದಿರೆ ಚಿಮ್ಮುತಿತ್ತು ಚಿಲುಮೆಯೊಂದು
ದಾಹ ನೀಗಿತು ಧಾರೆ ಹರಿಯಿತು ಆಯಿತದುವೇ ಶಕ್ತಿಸಿಂಧು || 1 ||
ದೈತ್ಯ ಶಕ್ತಿಯ ಚಂಡಮಾರುತ ಬೀಸುತಿತ್ತು ಭರದೊಳಂದು
ತತ್ತರಿಸದೆಯೆ ಎತ್ತರಿಸಿ ತಲೆ ಸಸಿಯು ಹೆಮ್ಮರವಾಯಿತಿಂದು || 2 ||
ದೈನ್ಯದಾಸ್ಯದ ವಿಕಟಹಾಸ್ಯಕೆ ನಡುಗುತಿತ್ತು ದೇಶವಂದು
ಸ್ವಾಭಿಮಾನದ ಐಕ್ಯಬಲದಿಂ ಎದ್ದು ನಿಂತಿದೆ ರಾಷ್ಟ್ರವಿಂದು || 3 ||
ಘನ ಪರಂಪರೆ ಹೊಂದಿದೀ ಧರೆ ವಿಸ್ಮೃತಿಗೆ ಒಳಗಾಯಿತಂದು
ಜಾಗೃತಿಯ ಜಯಘೋಷ ಮೊಳಗಿದೆ ಭಾರತದ ಜನಕೋಟಿ ಇಂದು || 4 ||