ಸುಪ್ತಸಾಗರನೆ ಶಕ್ತಿಯಾಗರನೆ

ಸುಪ್ತ ಸಾಗರನೆ ಶಕ್ತಿಯಾಗರನೆ
ತೆರೆಯ ಹಸ್ತಗಳ ತೆರೆದು ಶತ್ರುಗಳ ಥಳಿಸಿ ಅಪ್ಪಳಿಸಿದೆ || ಪ ||

ಜಯದ ಹಗಲಿನಲಿ ಜಗದ ಬಯಲಿನಲಿ
ಭಾಗ್ಯ ವೈರಾಗ್ಯದೆರಡು ಪದಗಳಲಿ ಕುಣಿದು ಕುಪ್ಪಳಿಸಿದೆ || ಅ.ಪ.||

ವಾಲಿ ರಾವಣರು ಸೂತ್ರಪುಥಳಿಗಳು
ಹಿಡಿದು ಕೋದಂಡ ನಡೆಸು ನಾಟಕವ ರಾಮ ಹೇ ಪುರುಷೋತ್ತಮ
ನೂರು ದಂತಿಗಳು ಆಟಕಣಿಯಾಗಿ
ಬಂದು ನಿಲುತಿವೆ ನೋಡು ಮುಂದೋಡು, ಆಡು ಬಾ ಬಾಲಭೀಮ || 1 ||

ಶ್ಯಾಮ ಶ್ರೀರಾಮ ಗುಪ್ತ ಶ್ರೀಹರ್ಷ
ಹನುಮ ಭೀಮರಲಿ ಪುಣ್ಯ ನಾಮರಲಿ ಬೆಳೆದಂತೆ ಭರತವರುಷ
ನಮ್ಮದೀ ಯುಗದೀ ನಮ್ಮ ಜೀವನದಿ
ಮರಳಿ ಕೃಪೆಯಿರಿಸು ಹೊಮ್ಮುತುದ್ಭವಿಸು ಅವತರಿಸು ರಾಷ್ಟ್ರಪುರುಷ || 2 ||

ಜನತೆಯಾಲಸ್ಯಜನಿತ ಪರದಾಸ್ಯ
ದೇಶದುದ್ದಗಲ ಹಬ್ಬಿದೆನಿತೊ ಸಲ ಚೈತನ್ಯಸರಿತೆ ಹರಿಸಿ
ನಾಡನೇಳಿಸಿದೆ ಧರ್ಮ ಬಾಳಿಸಿದೆ
ನೆಲದ ಪೀಳಿಗೆಯ ಉಳಿವು ಏಳಿಗೆಯ ಸಾಧಿಸಿದೆ ಸಬಲಗೊಳಿಸಿ || 3 ||

ಸಪ್ತಸಾಗರದ ಸುಪ್ತ ನಾಗರನ
ಘೋರ ಸಂತಪ್ತ ಕ್ರುದ್ಧ ಹೆಡೆಯೆತ್ತಿ ಅರಿಯನಪ್ಪಳಿಸು ವೀರ
ಜಗದ ಗರಡಿಯಲಿ ಜಯದ ಹುರುಡಿನಲಿ
ಗೆಲವು ಗೌರವಗಳೆರಡು ಅಡಿಗಳಲಿ ಕುಣಿದು ಕುಪ್ಪಳಿಸು ಬಾರ || 4 ||

Leave a Reply

Your email address will not be published. Required fields are marked *

*

code