ಸಿಂಧು ಸಾಗರದಿಂದ ಮಾರುತ

ಸಿಂಧುಸಾಗರದಿಂದ ಮಾರುತ ಬಂದು ಬಯಸುತ ಸ್ವಾಗತ
ಹಿಂದುಹಿಂದುವು ಬನ್ನಿರಿಲ್ಲಿಗೆ ದೇವಸನ್ನಿಧಿಗೆನ್ನುತ || ಪ ||

ಪೂರ್ವದಿಕ್ಕಿನ ದ್ವಾರದ್ವಾರಕು ಹಸುರು ಘಟ್ಟದ ತೋರಣ
ಕೆಳಗೆ ಪಶ್ಚಿಮ ತೀರದುದ್ದಕು ನೀಲವಾರಿಧಿಯಂಗಣ
ನಡುವೆ ಅರಳಿದ ಬಾಳಸಂಪದವಿಲ್ಲಿ ಬಂಧುರ ಸುಂದರ
ತಲೆಯ ತೂಗುವ ತಂಪನೆರೆಯುವ ತೆಂಗುಕಂಗಿನ ಹಂದರ || 1 ||

ವರುಷವೈದರ ಹಿಂದೆ ಶ್ರಾವಣ ಬಹುಳ ಅಷ್ಟಮಿ ಹಬ್ಬದ
ದಿನವೆ ಜನಿಸಿತು ಭರದಿ ಬೆಳೆಯಿತು ವಿಶ್ವಹಿಂದೂಪರಿಷದ
ತೀರ್ಥರಾಜ ಪ್ರಯಾಗ ಕ್ಷೇತ್ರದಿ ಕುಂಭಪರ್ವದಿ ಕಲೆಯುತ
ವಿಶ್ವದಗಲಕು ಕುಡಿಯ ಚಾಚಿತು ಕುಡಿದು ತಾ ಧರ್ಮಾಮೃತ || 2 ||

ಶೋಭೆಗೊಂಡಿದೆ ‘ಧರ್ಮಮಂಟಪ’ ಇಲ್ಲಿ ರವಿ ಶಶಿ ಸಾಕ್ಷಿಯು
ಅಕ್ಷಿ ತೆರೆದಿದೆ ಪಕ್ಷ ಕೆದರಿದೆ ಧರ್ಮ ಪ್ರಾಣದ ಪಕ್ಷಿಯು
ಕೀರ್ತಿ ಸಂಸ್ಕೃತಿ ಘನ ಪರಂಪರೆ ಮೂರ್ತಿವೆತ್ತಿಹ ಗುರುಗಣ
ಶ್ರದ್ಧೆ ಭಕ್ತಿಯು ತುಂಬಿದಂಬುಧಿಯಂತೆ ಮೆರೆವ ಸಭಾಂಗಣ || 3 ||

ಕಾಂತಿಗೊಂಡಿದೆ ಧರ್ಮವೇದಿಕೆ ಪೂಜ್ಯ ಪುರುಷರ ಪ್ರಭೆಯಲಿ
ನಮಿಸಿ ಅವರನು ಕೋರಿಕೊಳುವೆವು ಹರಕೆ ನೀಡಲಿ ಕೃಪೆಯಲಿ
ಧರ್ಮಮೇಳದ ದ್ವಾರ ತೆರೆದಿದೆ ಇಂದು ಸ್ವಾಗತ ಬಯಸುತ
ಅತಿಥಿ, ಪ್ರತಿನಿಧಿ ಬನ್ನಿರೆಲ್ಲರು ನಮ್ಮ ಮೊರೆ ಸ್ವೀಕರಿಸುತ || 4 ||

ಹೊನ್ನಖನಿ, ಶ್ರೀಗಂಧ ತೇಗದ ನಿಬಿಡ ಕಾನನದಿಂದಲಿ
ಮಲೆಯ ನಾಡಿನ ಬಯಲ ಬೀಡಿನ ನಗರ ಗ್ರಾಮಗಳಿಂದಲಿ
ಬಂದು ಸೇರಿದ ಬಂಧುಬಾಂಧವಗಣಕೆ ನಲ್ಬರವಿಲ್ಲಿಗೆ
ಪೂರ್ವ ಪಶ್ಚಿಮ ದಕ್ಷಿಣೋತ್ತರದಿಂದ ಐತಂದೊಲ್ಮೆಗೆ || 5 ||

ಮತ್ತೆ ಸ್ವಾಗತ ಲೋಕಪಾವನೆಯರಾ ಭೀಮೆಯ ಕೃಷ್ಣೆಯ
ತುಂಗಭದ್ರೆಯ, ತೆಂಕಣದ ಕಾವೇರಿ ತಾಯಿಯ ಕಪಿಲೆಯ
ತೀರದಿಂದಲಿ ಶುಭವ ತಂದಿಹ ಮಾತೆಯರ ಸಮುದಾಯಕೆ
ಶಿಶುಶಿಶುವ ಸಂಸ್ಕರಿಸಿ ರೂಪಿಪ ತಾಯ ಅಮೃತ ಹಸ್ತಕೆ || 6 ||

ವೇಷ ಭಾಷೆಯ ಜಾತಿ ಪಂಥದ ಭೇದಗಳು ನೂರಿದ್ದರು
ವಿವಿಧತೆಯೊಳೇಕತೆಯ ಮಂತ್ರವ ಅರಿತ ಜ್ಞಾನಿಗಳಿರುವರು
ಪ್ರೀತಿಯೊಂದೊಂದಾಗಿ ಬಾಳುವ ರೀತಿ ಬೋಧಿಸಬಲ್ಲರು
ಸಂತಶ್ರೇಷ್ಠರ ವಾಣಿಯಾಲಿಸಿ ಧನ್ಯರಾಗುವ ಎಲ್ಲರು || 7 ||

ಮಠಗಳಿಂದಲಿ ಕುಟಿಗಳಿಂದಲಿ ಹರಸ ಬಂದಿಹ ದೈವಕೆ
ಜ್ಞಾನವೃದ್ಧರ ಮನವಿಶುದ್ಧರ ಘನಪ್ರಬುದ್ಧರ ಪಾದಕೆ
ಮತ್ತೆ ವಂದನೆ ಲೋಕಹಿತಸಾಧನೆಗೆ ನೀಡಲಿ ಸನ್ಮತಿ
ಹಿಂದು ವಿಶ್ವಕೆ ವಿಶ್ವಗೌರವ ದೊರೆಯಲಂತೆಯೆ ಉನ್ನತಿ || 8 ||

Leave a Reply

Your email address will not be published. Required fields are marked *

*

code