ಶ್ರೀ ವಿವೇಕಾನಂದ ಗುರುವರ (ಕುವೆಂಪು)

ಶ್ರೀ ವಿವೇಕಾನಂದ ಗುರುವರ, ನವಯುಗಾಚಾರ್ಯ,
ರಾಮಕೃಷ್ಣರ ಭೀಮಶಿಷ್ಯನೆ, ವೀರ ವೇದಾಂತಿ,
ಭಾರತಾಂಬೆಯ ಧೀರಪುತ್ರನೆ, ಸಾಧು ಭೈರವನೆ,
ಸ್ಥೈರ್ಯದಚಲವೆ, ಧೈರ್ಯದಂಬುಧಿ, ಜಯತು! ಜಯ ಜಯತು! || ಪ ||

ಮೊರೆದು ಗರ್ಜಿಪ ಕಡಲ ವಾಣಿಯು ನಿನ್ನ ವರವಾಣಿ,
ಕಾರಮಿಂಚನು ನಗುವ ತೇಜವು ನಿನ್ನ ಮೈ ಕಾಂತಿ,
ಆಳವಂಬುಧಿಯಾಳ ಮೇರೆಯೆ ನಭದ ವಿಸ್ತಾರ
ಮಂದರಾದ್ರಿಯ ಮೀರಿದಚಲನು ನೀನು, ಯೋಗೀಂದ್ರ ! || 1 ||

ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರ ಮಂತ್ರ
ನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ
ನಮ್ಮ ಹೃದಯಕೆ ಹೃದಯ ನೀನಯ್, ಶಕ್ತಿ ಸಾಗರನೆ,
ಯಮನ ನುಂಗಿಹ ರಾಜಯೋಗಿಯೆ, ರುಂದ್ರ ಸಂನ್ಯಾಸಿ ! || 2 ||

ನಿನ್ನ ಧೈರ್ಯ ಸ್ಥೈರ್ಯ ದೃಢತೆಯು ನಿನ್ನ ಪವಿಶಕ್ತಿ
ಭಾರತೀಯರಿಗಿಂದು ಬೇಕಾಗಿಹುದು ದಿವ್ಯಾತ್ಮ
ರುದ್ರ ನರ್ತನವೆಸಗು ಹೃದಯದಿ, ಬುದ್ಧಿ ಭೈರವನೆ,
ರುದ್ರ ಭೂಮಿಗಳಾಗಲೆಮ್ಮೀ ಕ್ಷುದ್ರ ಹೃದಯಗಳು ! || 3 ||

ಬ್ರಹ್ಮವಿದ್ಯೆಯ ದಿವ್ಯ ದೀಪ್ತಿಯ ದೇಶದೇಶದಲಿ
ಹರಡಿ, ಅಭಯವನೀಯುತಮೃತವ ಸುರಿದು ಪಾಲಿಸಿದೆ,
ಗಗನಕೆತ್ತಿದೆ ಭಾರತಾಂಬೆಯ ಕೀರ್ತಿಕೇತನವ,
ಓಜೆ ತುಂಬಿಹುದಾರ್ಯ ಮಾತೆಯ ಶ್ರೀ ನಿಕೇತನವ ! || 4 ||

Leave a Reply

Your email address will not be published. Required fields are marked *

*

code