ಸರಿದರೇನು ತೆರೆಯ ಮರೆಗೆ

ಸರಿದರೇನು ತೆರೆಯ ಮರೆಗೆ ನಿನ್ನ ಮರೆಯಲಾರೆವು
ನೀನು ತೋರಿದಂಥ ಪಥವ ಎಂದೂ ತೊರೆಯಲಾರೆವು
ಮಧುರ ಸ್ವರದ ವಾದಕ .. ನಮನ ಅಮರ ಸಾಧಕ || ಪ ||

ಶತ ಸಹಸ್ರ ವಂಶಿಯಿಂದ ಮೊಳಗಿ ವೀರ ಸುಸ್ವರ
ಹೊಳೆವ ಶಂಖದೊಡಲಿನಿಂದ ದಿವ್ಯನಾದ ಸುಮಧುರ
ಅರಿಗಳೆದೆಯ ನಡುಗಿಸಿದ್ದೆ ಗುಡುಗಿ ಪಣವ ರೂಪದಿ
ಆನಕಗಳ ರಣರಣನದಿ ಝಲ್ಲರಿಗಳ ತಾಳದಿ || 1 ||

ಸಂಘಟನೆಗೆ ರಂಗು ತುಂಬುವಂಥ ಸಂಚಲನದಲಿ
ಸಂಚಲನಕೆ ಶೋಭೆ ತರುವ ದಿವ್ಯ ವಾದ್ಯಗಣದಲಿ
ಮೆರೆಯುತಿರುವ ಘೋಷದಂಡ ಅದುವೆ ನಿನಗೆ ಸ್ಮಾರಕ
ವಿಘ್ನಗಳನು ಮೆಟ್ಟಿ ಮುಂದೆ ಸಾಗಲೆಮಕೆ ಪ್ರೇರಕ || 2 ||

ಧ್ಯೇಯ ಪಥದಿ ದಿಟ್ಟತನದಿ ನೀನು ಇಟ್ಟ ಹೆಜ್ಜೆಗೆ
ಹೆಜ್ಜೆಗಳನು ಜೋಡಿಸುತ್ತ ಸಜ್ಜುಗೊಂಡು ಕಜ್ಜಕೆ
ಧಾವಿಸುವೆವು ವೇಗದಿಂದ ಹೊಸತು ಹೊಸ ದಿಗಂತಕೆ
ಮಾತೃಭಕ್ತಿ ಸಂಘ ಶಕ್ತಿ ಇರಲು ಏಕೆ ಅಂಜಿಕೆ? || 3 ||

(ಮಾ. ಸುಬ್ಬು ಶ್ರೀನಿವಾಸ್ ರವರು ನಿಧನರಾದಾಗ ರಚಿಸಿದ ಕವಿತೆ)

Leave a Reply

Your email address will not be published. Required fields are marked *