ಸಂಗೀತ ಸಾಮ್ರಾಜ್ಯದರಸುತನ

ಸಂಗೀತ ಸಾಮ್ರಾಜ್ಯದರಸುತನ ಕಿತ್ತೆಸೆದು
ರಾಷ್ಟ್ರಸೇವೆಗೆ ನಿಂತ ಶ್ರೀ ಯಾದವ
ಕೇಶವನ ಸಾನಿಧ್ಯ ಮಾಧವನ ಸಾಮೀಪ್ಯ
ಸ್ವರ್ಣಮಂದಾರದಲಿ ಸುಮ ಸೌರಭ || ಪ ||

ಭಾರತಿಯ ಚರಣದಲಿ ಗಾಯನದ ನೈವೇದ್ಯ
ಕೀರ್ತಿಮೋಹವ ಮರೆತ ಬಾಳಪಯಣ
ರಾಷ್ಟ್ರವೇ ಶ್ರುತಿಲಯವು ಜೀವನವೆ ಸಂಗೀತ
ತ್ಯಾಗಮಯ ಸಂಸ್ಕೃತಿಯ ಭೃಂಗಗಾನ || 1 ||

ಪೂರ್ವಸೂರಿಗಳೆಲ್ಲ ಸಾರಿ ತೋರಿದ ದಾರಿ
ಕೃತಿರೂಪವನು ಪಡೆದ ಸಂಘಕಾರ್ಯ
ಸ್ಪರ್ಷಮಣಿ ಗುಣಪಡೆದ ಚುಂಬಕದ ಸೆಳೆತದಲಿ
ಪ್ರತಿಮನದಿ ಟಿಸಿಲೊಡೆದ ಧ್ಯೇಯವಾದ || 2 ||

ಭಾಸ್ಕರನ ಬಿಸುಪಿನಲಿ ಚಂದ್ರಮನ ಶೀತಲತೆ
ಕಠಿಣತೆಯ ಚಿಪ್ಪೊಡೆಯ ಸ್ನೇಹ ಸಲಿಲ
ನಿಮ್ನತೆಯ ಭಾವನೆಯ ನಿರ್ಮಾಲ್ಯವನು ತೊಡೆದು
ನಿರ್ಮಿಸಿದೆ ಮನಮನದಿ ರಾಷ್ಟ್ರಸೌಧ || 3 ||

(ಶ್ರೀ ಯಾದವರಾವ್ ಜೋಶಿಯವರ ಬಗ್ಗೆ ಹಾಡು)

Leave a Reply

Your email address will not be published. Required fields are marked *