ಪ್ರಿಯ ಹಿಮಾಲಯ ಗಿರಿಯದೋ

ಪ್ರಿಯ ಹಿಮಾಲಯ ಗಿರಿಯದೋ
ಭಾರತಕೆ ಭೂಷಣವೆನಿಸುತಿಹುದು || ಪ ||

ಬದರಿಕಾಶ್ರಮ ಹರಿಯ ದ್ವಾರಾ
ಅಮರೇಶ ಹೃಷಿಕೇಶದಿರವು
ಕೇದಾರ ಗಂಗೋತ್ರಿಯಿರಲು
ಗುಹೆಗುಹೆಯು ತಾಪಸರ ಗೃಹವು
ದೃಷ್ಟಿ ಬೀರುತ ಸೃಷ್ಟಿ ಪ್ರಲಯವ
ಗೈವ ಶ್ರೇಷ್ಠರ ಧ್ಯಾನಶಿಬಿರ
ಸಾಂದ್ರ ಗಿರಿವನರಾಜಿ ರಂಜಿತ
ಓ ನಗಾಧಿಪ ಮಾನಬಿಂದು || 1 ||

ಶಿಷ್ಯಕುಲ ಗುರುಕುಲದಿ ನಿಂದು
ಧನಿಕ ಬಡವರ ಭೇದ ತೊರೆದು
ದೇಶ ಧರ್ಮವ ಪೊರೆದು ಪೋಷಿಸೆ
ಶಸ್ತ್ರ ಶಾಸ್ತ್ರದ ಜ್ಞಾನ ಪಡೆದು
ವಿಶ್ವದೊಡೆತನ ಗೈವ ಕ್ಷಮತೆಯ
ನೀಡಿದಾರ್ಯತೆ ನಿನ್ನದಿಹುದು
ಓ ಹಿಮಾಲಯ ಕಲ್ಪತರು ನೀ
ಭಾರತದ ಶುಭ ಕಾಮಧೇನು || 2 ||

ಸ್ವರ್ಣಗಂಗಾ ಗೌರಿಶಂಕರ
ತೀರ್ಥ ಶಿಖರದ ಕೀರ್ತಿಗಾನ
ಅಮರವೆಂದಿಗು ಹಿಂದುಹೃದಯದಿ
ಸಿಂಧು ಸುರನದಿಯುಗಮಸ್ಥಾನ
ಯಾತ್ರಿಕರ ಮನ ಸೆಳೆಯುತಿಹುದಾ
ಶೈಲಸರಸಿನ ಸ್ನಾನಪಾನ
ಓ ಹಿಮಾಲಯ, ಓ ಹಿಮಾಲಯ
ದೇಶವುಳಿವುದೆ ನಿನ್ನ ತೊರೆದು ? || 3 ||

ಹರನ ಮಂದಿರ ಗಿರಿಯ ಕಂದರ
ಅತುಲ ಸುಂದರ ಮುಗಿಲ ಹಾರ
ನರ ಕಿರಾತನ ದಣಿಸಿ ತಣಿಸಿ
ಪಾಶುಪತ ಪಡೆದಮಲ ಕ್ಷೇತ್ರ
ಮೈಲಿ ಸಾಸಿರ ಬಾಹು ಚಾಚುತ
ಘೋರ ದಾಳಿಯನೆನಿತೊ ತಡೆದ
ಶೈಲಕುಲ ಸಮ್ರಾಟ ಪೀಠ
ಆಕ್ರಮಣಕೊಳಗಾಗುತಿಹುದು ! || 4 ||

ಹಿಂದುವಾರಿಧಿಯೆಸೆವ ಹೆದ್ದೆರೆ
ದಶದಿಶೆಯನಪ್ಪಳಿಸುವಂತೆ
ಗುರಿಯ ಸೇರಲು ಗಿರಿಯ ಹಾರುವ
ಭೋರಿಡುವ ಜಲಪಾತದಂತೆ
ತುಂಬಿ ಹೃದಯದಿ ಪ್ರೇಮಗಂಗಾ
ಧರಿಸಿ ಭುಜದೊಳು ಶಕ್ತಿಸಿಂಧು
ಜೀವಸಮ ಹಿಮಗಿರಿಯ ರಕ್ಷೆಗೆ
ಧಾವಿಸದಿಹನೆ ಹಿಂದು ಹಿಂದು ! || 5 ||

Leave a Reply

Your email address will not be published. Required fields are marked *

*

code