ಒಂದುಗೂಡಿ ಬನ್ನಿ ನಾಡಸೇವೆಗೆ

ಒಂದುಗೂಡಿ ಬನ್ನಿ ನಾಡಸೇವೆಗೆ
ಶುದ್ಧಮನದಿ ಶ್ರದ್ಧೆಯಿಂದ ಗೈವಪೂಜೆಗೆ
ಬದ್ಧರಾಗಿ ದಿವ್ಯಧ್ಯೇಯ ಆದರ್ಶಕೆ
ಸಿದ್ಧರಾಗಿ ಸರ್ವಸ್ವ ನೈವೇದ್ಯಕೆ || ಪ ||

ನಮ್ಮ ಬೆವರು ರಕ್ತವ ತೈಲದಂತೆ ಎರೆಯುವಾ
ನಾಡಗುಡಿಯ ಬೆಳಗಲು ಬತ್ತಿಯಂತೆ ಉರಿಯುವಾ
ಕತ್ತಲನ್ನು ಕರಗಿಸಿ, ಸುತ್ತ ಬೆಳಕ ಮೂಡಿಸಿ
ಮನದಿ ಮನೆಯ ಮಾಡಿದಂಥ ಮೌಢ್ಯವನ್ನು ತೊಲಗಿಸಿ || 1 ||

ಸುಮ್ಮನಿರದೆ ಕಾರ್ಯಕಾಗಿ ಸತತಕಾಯ ಸವೆಸುವಾ
ಹೆಮ್ಮೆಯಿಂದ ಒಮ್ಮನದಲಿ ಗುರಿಯ ಕಡೆಗೆ ಚಲಿಸುವಾ
ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಜಗ್ಗದೆ
ವಿರೋಧಕೆಂದೂ ಬಗ್ಗದಂಥ ಗಟ್ಟಿತನವ ಗಳಿಸುವಾ || 2 ||

ಬಿದ್ದ ಜನರ ಮುಗ್ಧತೆಯನು ದುರುಪಯೋಗ ಪಡಿಸಿಹ
ವಿವಿಧ ಆಮಿಷಗಳೊಡ್ಡಿ ತಪ್ಪುದಿಶೆಗೆ ನಡೆಸಿಹ
ನಯವಂಚಕ ನರಿಗಳ ಕಿತ್ತು ಬಿಸುಟು ಸೋಗನು
ವಿಫಲಗೊಳಿಸಿ ಕೃತಕವೇಷ ಧರಿಸಿದವರ ಸಂಚನು || 3 ||

ಸೇವೆಯೊಂದೆ ದಾರಿದೀಪ ಪತಿತ ಜನರ ಬಾಳಿಗೆ
ಸೇವೆಯೊಂದೆ ದಿವ್ಯಮಂತ್ರ ದಿಟದಿ ನಮ್ಮ ಪಾಲಿಗೆ
ಸೇವೆಯಿಂದ ದೂರಗೊಳಿಸಿ ಉಚ್ಚನೀಚ ಭಿನ್ನತೆ
ಸೇವೆಯಿಂದ ಗಳಿಸಬನ್ನಿ ಮಾತೃಭುವಿಗೆ ಮಾನ್ಯತೆ || 4 ||

Leave a Reply

Your email address will not be published. Required fields are marked *

*

code