ಓ ಬೆಳಗಲಿಹುದದೋ ಭಾರತದ ಬಾನಂಚು
ಸತ್ತುರುಳುತಿದೆ ನಿಶಾಸುರನ ಸಂಚು
ಮೊಳಗುತಿದೆ ಸ್ಪೂರ್ತಿಯಲಿ ನೆಲದೊಕ್ಕೊರಲ ಕಂಚು
ಅರಳುತಿದೆ ಪ್ರೇರಣೆಯ ಲತೆಯ ಮಿಂಚು || ಪ ||
ಭುವಿಯಾಳಕಿಳಿದಿಳಿದು ಬೇರುಗಳ ಬಾಯಿಂದ
ನೆಲದೆದೆಯ ಪೀಯೂಷ ಪಡೆದು ಕುಡಿದು
ಹೆಬ್ಬಂಡೆಗಳನೆಬ್ಬಿಸುವ ಹೆಮ್ಮರದ ಹಾಗೆ
ಇಲ್ಲಿದೋ ಏಳುತಿದೆ ತರುಣಶಕ್ತಿ || 1 ||
ನಾಡಿನೆದೆ ಕುಲುಮೆಯಲಿ ನವತಿದಿಯ ತುದಿಯಲ್ಲಿ
ಕುತ್ತ ಕಲುಷಗಳ ಧಗಧಗಿಸಿ ದಹಿಸಿ
ಯಜ್ಞಯಾಗಗಳ ತಪತ್ಯಾಗಗಳ ಪ್ರತಿನಿಧಿಸಿ
ಅಗ್ನಿಯಂತುರಿಯುತಿದೆ ತರುಣಶಕ್ತಿ || 2 ||
ಹೆಮ್ಮೆಯಿಂದೆದೆಯೆತ್ತಿ ಹಿಮ್ಮಡಿಯ ಧರೆಗೊತ್ತಿ
ದುಷ್ಕಾಲನಾಗರನ ಹೆಡೆಯ ಮೆಟ್ಟಿ
ದಿಕ್ತಟದಿ ಹೊಂಗಿರಣದೋಕುಳಿಯ ಚಿಮ್ಮಿಸುತ
ಅರುಣನಂತರುಳುತಿದೆ ತರುಣಶಕ್ತಿ || 3 ||