ನಿಂತೆ ನಿಂತಿರುವಳಾ ಉದ್ದಕುದ್ದಂಡ

ನಿಂತೆ ನಿಂತಿರುವಳಾ ಉದ್ದಕುದ್ದಂಡ
ಸಂತಾನ ಕೂಡಿ ನವ ಜೀವನವ ಕಂಡ ||              || ಪ ||

ಕಾಶ್ಮೀರ ಕನ್ಯಾಕುಮಾರಿ ಪರ್ಯಂತ
ಭಾರತಿಯ ಶುಭಕಾಯ ಸುಭಗ ಶ್ರೀಮಂತ |
ಸಾರಯುತ ಸಮ್ಮಿಲಿತ ಫಲಭರಿತ ಆದ್ಯಂತ
ಆಶ್ವೇತ ಗಿರಿಕಾಯ ಶಿರಮುಕುಟ ಪ್ರಾಂತ ||          || 1 ||

ಯುಗ ಯುಗಾಂತರ ಗಂಗೆ ಹಿಮದುದರದಿಂದ
ಹೊಮ್ಮಿ ಹರಿದಿಹಳೆಮ್ಮ ಪೊರೆದು ಕೋದಂಡ |
ದಕ್ಷ ದರ್ಪವ ಅಳಿಸಿ ತಾರಕನ ವಧಿಸಿ
ಶಿಕ್ಷೆ ನಡಿಗಡಿಯ ಮೀರಿದರೆಂದು ವಿಧಿಸಿ ||         || 2 ||

ಧವಲಗಿರಿ ಧರಿಸಿಹುದು ಕಾಲಕಾಲಕ್ಕೆ
ರಕ್ತ ತಿಲಕವ ಲೋಕ ಕಾಪಾಡಲಿಕ್ಕೆ |
ನಮಗೆಲ್ಲ ಹೆಮ್ಮೆಯಾಗರ ತಪದ ಭೂಮಿ
ಸೋಮಶೇಖರ ಪಾರ್ವತಿಯರ ನೆಲೆಭೂಮಿ ||   || 3 ||

ಪುಣ್ಯ ಮಾನಸ ತೀರ್ಥ ಬದರಿ ಕೇದಾರ
ಧನ್ಯತೆಯ ಒದಗಿಸುವ ಬದುಕಿನಾಧಾರ |
ಅಶ್ಮತೃಣ ಕಾಷ್ಠಗಳು ತಪಗೈದು ಸತತ
ಕಶ್ಮಲವ ಕಳೆದಿಲ್ಲಿ ಇರ್ಪವು ಪುನೀತ ||               || 4 ||

ಸಾಷ್ಟಾಂಗ ನಮನ ನಮ್ಮಯ ಹಿಮಾಲಯಕೆ
ಅಲ್ಲಿರುವಮೋಘ ಮುನಿ ತಾಪಸ ವಿಜಯಕೆ |
ಭಾರತಿಯ ಶುಭಕಾಯ ಸುಭಗ ಶ್ರೀಮಂತ
ಆಶ್ವೇತ ಗಿರಿಕಾಯ ಶಿರಮುಕುಟ ಪ್ರಾಂತ ||      || 5 ||

Leave a Reply

Your email address will not be published. Required fields are marked *

*

code