ನಿನ್ನದೀ ಮನಭಾವನಾ ನಿನ್ನದೀ ಮನಭಾವನಾ
ಈ ಚೇತನಾ ಈ ಪ್ರೇರಣಾ ಈ ಸಾಧನಾ || ಪ ||
ಮಾತೆಸೇವೆಯ ಗೈವ ನಮ್ಮಯ ಭಾವಶಕ್ತಿಯು ನಿನ್ನದು
ರಾಷ್ಟ್ರರಕ್ಷಣೆ ಮಾಳ್ಪ ನಮ್ಮಯ ಶಕ್ತಿ ಶೌರ್ಯವು ನಿನ್ನದು || 1 ||
ಜನರ ಮನವ ಒಲಿಸಿ ಗೆಲುವ ಛಲವು ಒಲವು ನಿನ್ನದು
ಮನದ ರೂಪವು ತಿದ್ದಿತುಂಬುವ ಶೀಲ ಸಭ್ಯತೆ ನಿನ್ನದು || 2 ||
ಭಿನ್ನಭಾವವ ಬಿಟ್ಟು ಜನರ ಒಂದುಗೂಡಿಪ ಶ್ರಮವು ನಿನ್ನದು
ತನ್ನತನವನು ಜನರ ಮನದಿ ಬೆಳೆಸಿ ನಿಲಿಸಿದ ಕೀರ್ತಿ ನಿನ್ನದು || 3 ||
ಹಿಂದು ಮನದಲಿ ಮೊರೆಯುತಿರುವ ಮಾನವೂ ಅಭಿಮಾನವೂ
ಹಗಲು ಇರುಳು ನೀನು ಗೈದಿಹ ಶ್ರಮದಭಿಮಾನವೂ || 4 ||
ನೀನು ತೋರಿದ ದಾರಿ ತುಳಿಯುವ ಕಾರ್ಯ ಮಾತ್ರವೆ ನಮ್ಮದು
ಭರದಿ ಕಾರ್ಯವು ಬೆಳೆದು ನಿಲ್ಲಲು ಸ್ಫೂರ್ತಿ ಪ್ರೇರಣೆ ನಿನ್ನದು || 5 ||