ನವಯುವ ಜನರೇ ನೀಡಲು ಬನ್ನಿ

ನವಯುವ ಜನರೇ ನೀಡಲು ಬನ್ನಿ
ನಿಮ್ಮಯ ಬಿಸಿ ಬಿಸಿ ಹರೆಯ… ಮೇಲೆತ್ತಲು ಈ ಧರೆಯ  || ಪ ||

ಅಡಿಗಡಿಗೆದುರಾಗಿಹ ಆಕರ್ಷಣೆ
ಸ್ವಾರ್ಥದ ಚಿಂತನೆ ಸುಖದನ್ವೇಷಣೆ
ಮೈಮನ ಮರೆಸುವ ಸಾಸಿರ ಘೋಷಣೆ
ವಿಚಲಿತಗೊಳಿಸದೆ ಇರಲಿ… ಭ್ರಮೆಯಲಿ ಮುಳುಗಿಸದಿರಲಿ
ಕೇಳಿರಿ ಕಾಲದ ಕರೆಯ ಮೇಲೆತ್ತಿರಿ… ಈ ಧರೆಯ            || 1 ||

ಗತ ಇತಿಹಾಸದ ವೈಭವಗಾಥೆಯ
ಪುಟ ಪುಟ ತುಂಬಿಹ ಸಾಹಸ ಚರಿತೆಯ
ಪ್ರೇರಣೆ ನೀಡುವ ಗೆಲುವಿನ ಗೀತೆಯ
ಅಕ್ಷಯ ಅನುಪಮ ಆದರ್ಶ… ಅದರಾನಾಡಿನ ಉತ್ಕರ್ಷ
ತೆರೆಯಿರಿ ಭ್ರಾಂತಿಯ ತೆರೆಯ… ಮೇಲೆತ್ತಿರಿ ಈ ಧರೆಯ || 2 ||

ಕಾಶ್ಮೀರದ ಕರುಳಿನ ಆಕ್ರಂದನ
ಈಶಾನ್ಯದಿ ಉರಿಬೆಂಕಿಯ ನರ್ತನ
ಇದು ಇತಿಹಾಸದ ಪುನರಾವರ್ತನ
ಮೆರೆದಿರಲು ವಿಚ್ಛಿದ್ರತೆಯು… ಎಲ್ಲಿದೆ ನಾಡಿಗೆ ಭದ್ರತೆಯು
ಆಲಿಸಿ ಮಾತೆಯ ಮೊರೆಯ… ಮೇಲೆತ್ತಿರಿ ಈ ಧರೆಯ || 3 ||

ಹರೆಯದ ಚೇತನ ಇಂಗುವ ಮುನ್ನ
ಬಿಸಿನೆತ್ತರು ತಂಪಾಗುವ ಮುನ್ನ
ತಾರುಣ್ಯವು ತಲೆಬಾಗುವ ಮುನ್ನ
ಕಟ್ಟಲು ಬನ್ನಿ ಹೊಸನಾಡು… ಮೆಟ್ಟಲು ಬನ್ನಿ ಹೊಸ ಜಾಡು
ಅರ್ಥೈಸಿರಿ ಈ ತ್ವರೆಯ… ಮೇಲೆತ್ತಿರಿ ಈ ಧರೆಯ         || 4 ||

Leave a Reply

Your email address will not be published. Required fields are marked *

*

code