ನಂದಾದೀಪವಿದು ಎಂದಿಗೂ ನಂದದ

ನಂದಾದೀಪವಿದು, ಎಂದಿಗೂ ನಂದದ ಜ್ಯೋತಿಯಿದು |
ಎಂದೆಂದಿಗೂ ಸೂರ್ಯ ಚಂದ್ರರಿರುವ ತನಕ ಮಂದಿರದೊಳು
ಬೆಳಕೀಯುವುದು || ಪ ||

ಘನತಮವನು ಹರಿಸೀ | ಪ್ರತಿಕ್ಷಣ, ತನುವನುರಿಸಿ ಜ್ವಲಿಸೀ |
ತನುವಿದು ನಶ್ವರವೆನುತರಿಯುತ, ಜೀವನ ಸಾರ್ಥಕಗೈದು || 1 ||

ಮುಕ್ತಿಯನಿಚ್ಛಿಸದು | ದಣಿದು ವಿರಕ್ತಿಯ ತಳೆಯದದು |
ಭಕ್ತಿಗೆ ಮಾತೆಯ ವ್ಯಕ್ತ ಸ್ವರೂಪವ ವ್ಯಕ್ತೀಕರಿಸುವುದು || 2 ||

ಬೆಳಗುವುದೀ ಜ್ಯೋತಿ | ಇತರರ ಬೆಳಗಿಸುವುದು ಜ್ಯೋತಿ |
ಬೆಳಗಿಸಿ ದಶದಿಶೆಗಳ ಧ್ಯೇಯದ ಪಥದೊಳು ಮುಂದರಿಯುವುದು || 3 ||

ಬತ್ತಿಯಿದಕ್ಷಯವು ಸ್ನೇಹವು ಬತ್ತದು ನಿಶ್ಚಯವು |
ಮಾತೆಯ ವೈಭವದುತ್ತಮ ನೆನಹನು | ಚಿತ್ತಕೆ ತಂದಿಹುದು || 4 |||

ಪ್ರಳಯವೇ ಬರಲಿಂದೂ | ಜ್ವಾಲೆಯುಗುಳಲೀ ಭುವಿ ಬೆಂದು |
ಚಲಿಸದೆ ಸ್ಥಿರ ಮನದೊಳು ಜ್ವಲಿಸುವ, ಮಂಗಳ ದೀಪವ ನೋಡು || 5 ||

ಘನ ದೀಪವಿದೊಂದು ಅಗಣಿತ | ಹಣತೆಗಳಿವೆಯಿಂದು |
ಅನುದಿನ ಭಕ್ತರ | ಮನವನು ಸ್ಫೂರ್ತಿಕಿರಣದಿ ಬೆಳಗುವುದು || 6 ||

Leave a Reply

Your email address will not be published. Required fields are marked *