ನಮ್ಮ ಮನೆ ಇದು ನಮ್ಮ ಮನೆ
ನಲಿವಿನ ಅರಿವಿನ ನಮ್ಮ ಮನೆ |
ರೀತಿಯ ನೀತಿಯ ಭದ್ರ ಬುನಾದಿಯ
ಮೇಲೆ ನಿಂತಿದೆ ನಮ್ಮ ಮನೆ || ಪ ||
ತಾಯಿಯ ಮಮತೆಯ ತಂದೆಯ ಪ್ರೀತಿಯ
ಸೆಲೆಯಲಿ ತೆರೆದಿದೆ ನಮ್ಮ ಮನೆ
ಅಜ್ಜಿಯ ಕಥೆಯ ಅಜ್ಜನ ಶಿಸ್ತಿನ
ನಿಲುವಲಿ ನಿಂತಿದೆ ನಮ್ಮ ಮನೆ || 1 ||
ಹಕ್ಕಿಗಳುಲಿವಿಗೆ ನೇಸರನುದಯಕೆ
ಏಳುವರೆಲ್ಲರು ಮುದದಿಂದ
ಮೀಯುತ ಮಡಿಯಲಿ ನೆನೆಯುತ ದೇವಗೆ
ಭಕುತಿಯ ನಮನ ಕರದಿಂದ || 2 ||
ಅಕ್ಕತಂಗಿಯರ ಅಣ್ಣತಮ್ಮಂದಿರ
ಕದನಕುತೂಹಲ ಮುದವಿರಲು
ಬೆಳೆಯುತ ನಾವು ಮುಂದಿನ ಪ್ರಜೆಗಳು
ದೇಶದ ಆಸ್ತಿಯು ನಾವೆನಲು || 3 ||
ಹಬ್ಬಹರಿದಿನದಿ ಮಾವು ಬಾಳೆಯು
ಸಿಂಗರಿಸಿರಲು ಹಸಿರಿಂದ
ರಂಗವಲ್ಲಿಯು ಹೊಸ್ತಿಲದೀಪವು
ರುಚಿ ರುಚಿ ಅಡಿಗೆಯು ಘಮ್ಮೆಂದು || 4 ||
ಶಾಲೆಯು ಇದುವೆ ಬದುಕಿನ ಪಾಠಕೆ
ನಾಳೆಯ ಕನಸಿಗೆ ಕೇತನವು
ದೇಶವ ಕಟ್ಟುವ ಸಂಸ್ಕೃತಿ ಸಾರಕೆ
ಕೇಶವ ಕುಲದ ನಿಕೇತನವು || 5 ||