ಮೈ ಮರೆತಭಿಮಾನವು

ಮೈ ಮರೆತಭಿಮಾನವು ಮೈ ಕೊಡಹುತ ಮೇಲೇಳುತಿದೆ
ಮರುತನ ಸ್ವರದಲಿ ನವ ರಾಗೋದಯದುಲಿ ಕೇಳುತಿದೆ || ಪ ||

ಅಳಲಿನ ನಿಶೆ ಅಳಿಯಿತು ಅಳುತಳುತೆ, ಮೊಳಗಿತಿದೋ ಮುಂಜಾವಿನ ಗೀತೆ
ಜೀವನಕುಸುಮಗಳರಳಿರೆ ನಗುತೆ, ರುಧಿರಾರ್ಚನೆಗಿನ್ನಾವುದು ಕೊರತೆ?
ಇತಿಹಾಸದ ಕಥೆ, ಉಪಹಾಸದ ವ್ಯಥೆ ಮೈತಾಳುತಿದೆ || 1 ||

ಹಾರಿದ ಭರವಸೆಗಳ ಖಗಕುಲವು, ಹೃದಯದ ಗೂಡಿಗೆ ಮರಳುತಲಿಹುದು
ಬಾಳಡಿಯಲಿ ಸಾಯುತಲಿರೆ ಸಾವು ಬಗೆ ಬೆದರದು ಬಳಿ ಸುಳಿಯದು ನೋವು
ಕರ್ಬೊಗೆ ಗಾಳಿಗೆ ಕರಗುವ ಬಗೆ ಹಗೆ ಹಿಂದೋಡುತಿದೆ || 2 ||

ಪ್ರಗತಿ ಪರಾಗತಿಗಳ ಏರಿಳಿದು, ಶತಮಾನಗಳೆನಿತೆನಿತನೊ ಕಳೆದು
ಮೈಮೆರೆಸುವ ಪೀಡಕರನು ತುಳಿದು, ನಿಂದುದು ನಾಡಿದು ಹೊಸ ಮೈತಳೆದು
ಪುನರಪಿ ಪುನರುತ್ಥಾನವ ಪಡೆಯಲು ಹೋರಾಡುತಿದೆ || 3 ||

ಕೈಜಾರಿದ ಕೈಲಾಸದ ಕರೆಗೆ, ಮರುದನಿ ಕನ್ಯಾಕುವರಿಯವರೆಗೆ
ಕಳೆದಗಲುತಲಿಹ ಭರತನ ಭುವಿಗೆ, ಅಭಯವಿದೊ ಅರಿಯುರುಳಲಿ ಧರೆಗೆ
ಚಿರಜೀವಿಯ ಹೃದಯದಿ ಚಿರವಿಜಯದ ಹೂಂಕಾರವಿದೆ || 4 ||

Leave a Reply

Your email address will not be published. Required fields are marked *

*

code