ಮುನಿಸು ತೊರೆದು ಹರುಷ ತೋರು

ಮುನಿಸು ತೊರೆದು ಹರುಷ ತೋರು
ನಮ್ಮ ತಾಯಿ ಭಾರತೀ
ಹರಸು ನಮ್ಮ ಶಿರವ ಪಿಡಿದು
ತರುವೆವಮ್ಮ ಕೀರುತಿ || ಪ ||

ಹೊಂಚು ಹಾಕಿ ಹಿರಿಯಲೆಂದು ಅಡಗಿ ಕುಳಿತ ಅರಿಗಳು
ಬಿಡುವೆವೇನು ಕಡಿವೆವಲ್ಲೆ ನಾವು ಧೀರ ಮಕ್ಕಳು
ಚೆನ್ನಮ್ಮ ಲಕ್ಷ್ಮೀ ನಾವೇ ಕ್ಷಾತ್ರ ತೇಜ ಕುಡಿಗಳು || 1 ||

ಪ್ರತಿ ಗೃಹದ ಒಳಗಿನಿಂದ ಕೇಳುತ್ತಿದೆ ಮೊಳಗು
ಭೈರವಿಯ ಶಕ್ತಿಧರಿಸಿ, ತರುವೆವು ಬೆಳಗು
ಬೇಡವೆಮಗೆ ಸ್ವತ್ವವಿರದ ವಿದೇಶೀಯರ ಬೆಡಗು
ಸ್ವದೇಶ ಭಾಷೆ ವಸ್ತ್ರವೆಮಗೆ ಎಂದೆಂದೂ ಸೊಬಗು || 2 ||

ಸತ್ವವಿರದೆ ನೂರು ವರ್ಷ ಬದುಕಬೇಕು ಏತಕೆ
ಸಾವಿನಲ್ಲು ಅಮರರಾಗಿ ಮೆರೆವ ಆಸೆ ಜೀವಕೆ
ನಿನ್ನ ರೋಮ ಕೊಂಕದಿರಲು ಸಿದ್ಧನಾವ್ ಬಲಿದಾನಕೆ
ಪ್ರಾಣಪುಷ್ಪ ಸದಾ ಸಿದ್ಧ ನಿನ್ನ ಚರಣ ಸೇವೆಗೆ || 3 ||

ಸ್ವಾರ್ಥ ಸುಖದ ಆಮಿಷಕ್ಕೆ ವ್ಯರ್ಥ ವೇಳೆ ಕಳೆಯೆವು
ಹಸಿವು ನಿದ್ದೆ ಎಂಬುದಿಷ್ಟೆ ಬದುಕು ಅಲ್ಲ ತಿಳಿದೆವು
ವಿಸ್ಮೃತಿಯ ತೆರೆ ಕಳಚಿ ಅಸ್ಮಿತೆಯ ಕಂಡೆವು
ವಿಶ್ವಮುಕುಟ ನಿನಗೆ ತೊಡಿಸಿ ಧನ್ಯತೆಯಲಿ ಮೆರೆವೆವು || 4 ||

Leave a Reply

Your email address will not be published. Required fields are marked *

*

code