ಮೂಕವಾಯಿತು ವಂಶಿ

ಮೂಕವಾಯಿತು ವಂಶಿ
ಶೋಕ ತಳೆಯಿತು ಶಂಖ
ಸ್ತಬ್ಧವಾಯಿತು ಪಣವ ಆನಕದ ರಣನ
ವಾದ್ಯಗಳ ಭೋರ್ಗರೆತ ತಾಳಿಹುದು ಮೌನ,
ಸುಬ್ಬಣ್ಣನಾ ಸ್ಮೃತಿಗೆ ಕಣ್ಣೀರ ನಮನ || ಪ ||

ಶುಭ್ರ ಮೈಕಾಂತಿಗೆ ಧವಳ ಶೀಲದ ಮೆರಗು
ಎಳೆಯ ಗೆಳೆಯರ ಸೆಳೆದೆ ಬೆಳೆವ ಪಥಕೆ
ಮೊಳಗಿ ಶಂಖೋದ್ಘೋಷ ಪಾರ್ಥಸಾರಥಿಯಾದೆ
ಅಶ್ವಗಳು ನಾವೆಲ್ಲ ನಾಡ ರಥಕೆ || 1 ||

ಲಯಬದ್ಧ ಸಂಚಲನ ಸ್ವರ ಶುದ್ಧ ಸಂಕಲನ
ಮೇಲೆತ್ತಿ ಪಿಡಿದಿದ್ದೆ ಧ್ಯೇಯದಂಡ
ನಿತ್ಯ ನೂತನ ವಾದ್ಯ ಏನದರ ವೈವಿಧ್ಯ
ಪುಳಕಗೊಂಡಿತು ಸಕಲ ಭರತಖಂಡ || 2 ||

ದಿಟ್ಟತನದ ನಡಿಗೆ ಆದರ್ಶ ಗುರಿಯೆಡೆಗೆ
ಹುಟ್ಟು ಸಾವಿನ ನಡುವೆ ಪಟ್ಟಪಾಡು
ಹೆಜ್ಜೆ ಹೆಜ್ಜೆಗು ವಿಘ್ನ, ನೀನು ಕಾರ್ಯದಿ ಮಗ್ನ
ನೀ ತುಳಿದ ಪಥವೆಮಗೆ ಸ್ಫೂರ್ತಿ ಜಾಡು || 3 ||

ನಿನ್ನ ಹೆಜ್ಜೆಯ ಗತಿಗೆ ಮಿಡಿದ ಸುಮಧುರ ಶೃತಿಗೆ
ಸ್ಪಂದಿಸುತ ಸಾಗಿಹುದು ತರುಣ ಪಡೆಯು
ದಿಗ್‍ದಿಗಂತದಗಮ್ಯ ಗಡಿದಾಟಿ ಮಾರ್ದನಿಸಿ
ಮೊಳಗುತಿಹ ಜಯಘೋಷಕೆಲ್ಲಿ ತಡೆಯು? || 4 ||

(ಮಾ. ಸುಬ್ಬು ಶ್ರೀನಿವಾಸ್ ರವರು ನಿಧನರಾದಾಗ ರಚಿಸಿದ ಕವಿತೆ)

Leave a Reply

Your email address will not be published. Required fields are marked *