ಮರೆವಿನ ಅರಿವೆಯ ಪರದೆಯ

ಮರೆವಿನ ಅರಿವೆಯ ಪರದೆಯ ಸರಿಸುತ
ಅರಿವಿನ ಪ್ರಣತಿಯ ಉರಿಸೋಣ
ಹಿರಿಯರ ಚರಣದ ಗುರುತಿನ ನೆರವಲಿ
ಕ್ರಮಿಸುತ ಗುರಿಯನು ಸೇರೋಣ || ಪ ||

ಭರತ ಭಗೀರಥರಾಳಿದ ಭಾರತ
ಪರಶುಧರನ ಧುರ ಸ್ಮರಿಸೋಣ
ಶಸ್ತ್ರದಿ ಶಾಸ್ತ್ರದಿ ಪ್ರೌಢಿಮೆ ಮೆರೆಯುತ
ವೀರ ಧರಿತ್ರಿಯ ಉಳಿಸೋಣ || 1 ||

ರಾಮಾಯಣ, ಗುರು ವ್ಯಾಸರ ಭಾರತ
ಸಾರಿದ ಸೂತ್ರವ ಅರಿಯೋಣ
ಧರ್ಮದ ನೆಲೆಯಲಿ ಜೀವನ ನಡೆಸುತ
ಜನ್ಮವ ಸಾರ್ಥಕಗೊಳಿಸೋಣ || 2 ||

ನರಳುತ ನೆರಳನು ಅರಸುತಲಿರುವರ
ಗುರುತಿಸಿ ನೆರವನು ಈಯೋಣ
ಉದರದ ಭರಣಕೆ ಅರಿವಿಗೆ, ಅರಿವೆಗೆ
ಸರಿ ದಾರಿಯನೇ ತೋರೋಣ || 3 ||

ಮಾನವ್ಯದ ಕರೆ, ಕರ್ತವ್ಯದ ಕರೆ
ಆಲಸ್ಯವ ತೊರೆದು ಏಳೋಣ
ದೀನ ದರಿದ್ರರ ದೈನ್ಯತೆ ತೊಲಗಿಸಿ
ಸ್ವಾವಲಂಬನೆಯ ಕಲಿಸೋಣ || 4 ||

Leave a Reply

Your email address will not be published. Required fields are marked *

*

code