ಖಿನ್ನತೆಯ ಕಳೆದಳಿಸಿ

ಖಿನ್ನತೆಯ ಕಳೆದಳಿಸಿ ಭಿನ್ನತೆಯ ಬದಿಗಿರಿಸಿ |
ಧನ್ಯತೆಯ ಮಾರ್ಗದಲಿ ಸಾಗೋಣ ಬನ್ನಿ |
ಧರೆಗೆ ಸೇವೆಯ ಪ್ರಭೆಯ ಬೀರೋಣ ಬನ್ನಿ || ಪ ||

ಎನಿತೊ ಜನ್ಮದ ಪುಣ್ಯಫಲವೆಮಗೆ ಲಭಿಸಿಹುದು
ಗುರಿ ಇರದ ಜೀವನಕೆ ಹೊಸದಿಶೆಯು ದೊರೆತಿಹುದು
ಗುರುಹಿರಿಯರಾದರ್ಶ ದಿವ್ಯ ಮೇಲ್ಪಂಕ್ತಿ
ಬೆಂಬಲಕೆ ಇಹುದೆಮಗೆ ಸಂಘಟನೆಯ ಶಕ್ತಿ || 1 ||

ತರತಮವು ಇಲ್ಲದಿಹ ಸದೃಢ ಸಮಾಜವನು
ಕೊರತೆ ಇನಿತೂ ಇರದ ಸಮೃದ್ಧ ದೇಶವನು
ನಿರ್ಮಾಣಗೈಯುವುದೆ ಬಾಳಗುರಿಯಾಗಿರಲಿ
ಕಷ್ಟವೆನಿತೇ ಬರಲಿ ಮುನ್ನಡೆವ ಛಲವಿರಲಿ || 2 ||

ನಾಡಿನೇಳಿಗೆಗಾಗಿ ನಮ್ಮೆಲ್ಲ ಸಾಮರ್ಥ್ಯ
ಭಾರತಾಂಬೆಯ ಪಾದತಳದಲ್ಲಿ ನೈವೇದ್ಯ
ಒಯ್ಯೋಣ ರಾಷ್ಟ್ರವನು ಉತ್ತುಂಗ ಸ್ಥಿತಿಗೆ
ಸಾರ್ಥಕ್ಯ ಲಭಿಸಲಿದೆ ನಮ್ಮೆಲ್ಲ ಕೃತಿಗೆ || 3 ||

Leave a Reply

Your email address will not be published. Required fields are marked *

*

code