ಕತ್ತೆ ಸತ್ತು ಹೋಯಿತು

ಮಗೂ !
ನೀನು ಪುಸ್ತಕದಲ್ಲಷ್ಟೇ ಓದಿದೆ
ನಾನೊ-ಕಣ್ಣಾರೆ ಕಂಡಿದ್ದೆ,
ತಂದೆ ಮಗ ಹೊತ್ತು ತರುವುದನು,
ದೂರದ ಪಯಣ, ಅರಿಯದ ಹಾದಿ,
ಕಲ್ಲುಮುಳ್ಳಿನ ನಡೆ, ಬನ್ನ ಬವಣೆಯ ದಿನ,
ಇಳಿವ ಬೆವರು, ಸುರಿವ ರಕುತ
ಬಾಗಲಿಲ್ಲ ದೇಹ, ಸೋಲಲಿಲ್ಲ ಜೀವ,
ತಂದೆ ಮಗ ಹೊತ್ತು ಹೊತ್ತು ತಂದಿದ್ದರು ಕತ್ತೆ,
ಮಗೂ!,
ನಾನೊ, ಪಡುವಲದಂಚಿನ ಸವೆದ ಚಂದಿರ
ನೀನೊ ಉದಯಗಿರಿಯಲಿ ಕಣ್ತೆರವ ನೇಸರು
ಉತ್ಸಾಹ ಸಾಹಸದ ಉರಿವ ನಾಲಗೆ ನಿನ್ನೆದೆಯನಾಳಿದೆ.
ಕಾಲ ಬೆತ್ತಲಾಗಿ ನೀಡಿ ನಿಂತಿದೆ.
ನಿನಗೆ ಬೇಕೇ ಬೇಕಣ್ಣ ಕತ್ತೆ,
ಆಡಿ ಪಾಡಲು, ಕೂಡಿ ಕುಣಿದಾಡಲು, ಏರಿ ಉಡ್ಡೀನಿಸಲು.
“ತಡೆವವರು ಬನ್ನಿರೊ. . . . . . . . . .
. . . . . . . . . . . . . . . . . . . .
ಕೊಟ್ಟೆವಿದೋ ವೀಳೆವನು” ಎಂಬ ಛಲ ಬಲಗಳೊಡನೆ
ನೀನು ಹೊರಡಬೇಕಪ್ಪಾ ಕತ್ತೆಯ ತರಲು.
ಸಕಲ ಸುಲಕ್ಷಣಗಳ ರಾಸಭವ ತರಬೇಕು!

ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ರಚನೆ (ತುರ್ತು ಪರಿಸ್ಥಿತಿ ಹಾಡು – ಕವನ)

Leave a Reply

Your email address will not be published. Required fields are marked *