ಜೀಜಾ ಮಾತೆಯ ಪುಣ್ಯಗರ್ಭದಲಿ
ಅವತರಿಸಿದನೀ ಶಿವರಾಯ
ತುಳಜಾಮಾತೆಯ ಖಡ್ಗ ಕರದಲ್ಲಿ
ಅರಿಗಳಿಗಿವನೇ ಜವರಾಯ || ಪ ||
ಮಾವಳಿ ಪೋರರ ಸೈನ್ಯ ರಚಿಸಿದ
ಹದಿನಾಲ್ಕು ವರುಷದ ಜಗಜಟ್ಟಿ
ಮೊಗಲ ಕೋಟೆಗೆ ಮುತ್ತಿಗೆ ಹಾಕಿದ
ಹಿಂದು ಸ್ವರಾಜ್ಯಕೆ ತೋರಣ ಕಟ್ಟಿ || 1 ||
ಮದಿಸಿದರಸರ ಸೊಲ್ಲಡಗಿಸುತ
ಮಾನಿನಿ-ಮಂದಿರ ರಕ್ಷಿಸಿದ
ಧರ್ಮದ್ರೋಹಿಗಳ ಸಂಹರಿಸುತ
ಗೋ ಹಂತಕರನು ಶಿಕ್ಷಿಸಿದ || 2 ||
ವಾಮನ ರೂಪದ ಮಹಾವೀರನು
ಕಪಟ ಅಫ್ಜಲನ ಸಂಹಾರಿ
ಮೃತ್ಯು ಕೂಪದಿ ಈಸಿ ಜೈಸಿದನು
ಸಿಂಹ ನಡಿಗೆಯ ಸಂಚಾರಿ || 3 ||
ಬಾಹುಬಲದಲಿ ಹೋಲಿಕೆಯಿಲ್ಲ
ಕ್ಷಾತ್ರ ಪರಂಪರೆ ವಾರಸುದಾರ
ಬುದ್ಧಿಬಲದಲೂ ಸಾಟಿಯೇ ಇಲ್ಲ
ಚಾಣಕ್ಯ ಕನಸಿನ ಸರದಾರ || 4 ||