ಹುಟ್ಟಿದವರೆಷ್ಟೋ ಯುಗಾದಿಯ ದಿನ

ಹುಟ್ಟಿದವರೆಷ್ಟೋ ಯುಗಾದಿಯ ದಿನ
ಹೊಸ ಯುಗಾದಿ ಸೃಷ್ಟಿಸಿದವರೆಷ್ಟು ಜನ? || ಪ ||

ಹಾಗೂ ಒಬ್ಬರು
ಅವರೂ ಅವರನ್ನೂ ಹಡೆದದ್ದು ಯುಗಾದಿ
ಹಿಡಿದದ್ದು ಹೊಸ ಹಾದಿ ಪಡೆದದ್ದು ಮುಳ್ಳಿನ ಗಾದಿ
ನುಡಿದದ್ದು ನಡೆದದ್ದು ದುಡಿದದ್ದು
ದೇಶಕ್ಕೆ ಭದ್ರ ಬುನಾದಿ
ಹರಿಸಿದ್ದು ಜೀವನದ ಜೀವನದಿ
ಸೇರಿದ್ದು ಯುವಮನದ ನಿಸ್ಸೀಮ ಜಲಧಿ || 1 ||

ತುರ್ತಿನ ವರ್ತುಲ ಸುತ್ತಿಸುವ
ಕಡಲುಗಳ್ಳರ ಬೀಸುಗತ್ತಿಗೆ
ಹೆದ್ದೆರೆ ಸಾಯುವುದಿಲ್ಲ
ಅವರನ್ನಳಿಸಲು ಕಾಯುವುದಿಲ್ಲ
ಅಳಿಸಿ ತಳಕಿಳಿಸಲು ನೋಯುವುದಿಲ್ಲ || 2 ||

ದಡದಲ್ಲಿ ದೃಢವಾಗಿ ನಿಂತವರಿಂದ
ಧ್ಯೇಯಸೂರ್ಯನಿಗೆ ನಮಸ್ಕಾರ
ಶುಭಕಾರ್ಯದಾರಂಭಕ್ಕೆ ಶುಚಿ ಬಾಹ್ಯಾಭ್ಯಂತರ
ಶುಚಿಗೆ ಮೊದಲಿನದಾಚಮನ
ಆಚಮನಕನಿವಾರ್ಯ ಕೇಶವನ ನಾಮೋಚ್ಚಾರ || 3 ||

Leave a Reply

Your email address will not be published. Required fields are marked *

*

code