ಹನಿಯು ವಾಹಿನಿಯಾಯ್ತು ವಾಹಿನಿಯು ಜಲಧಿ
ಕೇಶವನ ಛಲಧಾರಿ ಯುವಜನರ ಬಲದಿ
ಸತತ ಸಾಧನೆಗೈದ ಭಾರತದ ನೆಲದಿ || ಪ ||
ವಿಘ್ನಕೋಟಿಯ ಗೆದ್ದು ದಾಟಿಹುದು ಸಂಘ
ಅಗ್ನಿಯೊಳು ಮಿಂದು ಮೇಲೆತ್ತಿಹುದು ಶೃಂಗ
ಗೈದಿಹುದು ವೈರಿಗಳ ಬಹುವ್ಯೂಹ ಭಂಗ
ಪಸರಿಸಿದೆ ಸಾಹಸದ ಸಾಸಿರ ತರಂಗ || 1 ||
ರೂಢಿಯೊಳಗೂಡಿರುವ ಮೌಢ್ಯವನು ತೊರೆದು
ಕಾಡಿರುವ ಕೇಡುಗಳ ಬೆನ್ನೆಲುಬು ಮುರಿದು
ಮೂಡಿಹನು ನೋಡಲ್ಲಿ ಜಾಗೃತಿಯ ಸೂರ್ಯ
ನೀಡಿಹನು ನಾಡಿದಕೆ ಕುಂದದಿಹ ಧೈರ್ಯ || 2 ||
ಆಂತರಿಕ ಭೇದಗಳ ಅಂತರವನಳಿಸಿ
ಅಂತರಂಗದಿ ಐಕ್ಯ ಭಾವನೆಯ ನಿಲಿಸಿ
ಹಿಂದುಶಕ್ತಿಯು ಜಗದಿ ಬೆಳೆದು ಬಲವಾಯ್ತು
ವಿವಿಧ ವಾದ ವಿವಾದ ನೆಲೆಕಳೆದು ಹೋಯ್ತು || 3 ||