ಎತ್ತರಕೇರಿಸಿ ಭಗವಾಧ್ವಜವ

ಎತ್ತರಕೇರಿಸಿ ಭಗವಾದ್ವಜವ ಧರ್ಮದ ಮಹಿಮೆಯ ಮೆರೆಯಿಸುವಾ |
ಉತ್ತರವೀಯುತ ಯುಗದ ಸವಾಲಿಗೆ ನವ ಇತಿಹಾಸವ ನಿರ್ಮಿಸುವಾ || ಪ ||

ಅಂಕೆಯ ಮೀರಿದ ದುರಹಂಕಾರದಿ ಮೆರೆದಿರಲಂದು ರಾವಣನು
ಬೆಂಕಿಯ ಬಲೆಯೊಳು ಲಂಕಾ ನಗರಿಯ ಉರಿಸಿದ ಅಂಜನಿ ನಂದನನು
ಪಟ್ಟವ ಕಟ್ಟಿ ವಿಭೀಷಣಗಂದು ಧರ್ಮವ ಮೆರೆಸಿದ ರಾಘವನು
ತ್ಯಜಿಸುತ ಸುರವೈಭೋಗವನು || 1 ||

ದುಷ್ಟಕೌರವರ ಅಕ್ಷೋಹಿಣಿಬಲ ಪಡೆದಿರೆ ಸಜ್ಜನರಾಹುತಿಯ
ಸೃಷ್ಟಿಯ ಭಾರವ ನೀಗಿದ ಕೃಷ್ಣನು ತೊಡೆಯುತ ದುರ್ಜನ ಸಂತತಿಯ
ವಿಜಯದ ಶಂಖೋದ್ಘೋಷವು ಮೊಳಗಿತು ಸಾರುತ ಧರ್ಮದ ಉನ್ನತಿಯ
ತೋರುತ ನಾಡಿಗೆ ಸದ್ಗತಿಯ || 2 ||

ಬರ್ಬರ ಮೊಗಲರ ದಬ್ಬಾಳಿಕೆಯೊಳು ಹಿಂದುವಿಗಾಗಿರೆ ಹೀನಗತಿ
ಸೊಕ್ಕನು ಮುರಿಯುತ ರಕ್ಕಸಕುಲವನು ಮೆಟ್ಟಿಗೆಲಿದನು ಛತ್ರಪತಿ
ಸಾರಥಿಯಾಗುತ ಭಾರತಿದೇವಿಯ ರಥವನು ನಡೆಸಿದ ಆ ನೃಪತಿ
ಮೆರೆಸುತ ಕ್ಷಾತ್ರದ ವೀರಕೃತಿ || 3 ||

ಹಿಂದು ಜನಾಂಗಕೆ ಧೈರ್ಯವ ತುಂಬಲು ಅವತರಿಸಿದನು ಕೇಶವನು
ಬಂಧುಗಳೆಲ್ಲರ ಒಂದುಗೂಡಿಸುತ ಉದ್ಧರಿಸಿದನು ದೇಶವನು
ಎಚ್ಚರಗೊಳಿಸುತ ನಿದ್ರಿತ ಜನತೆಯ ಮೊಳಗಿಸಿ ಐಕ್ಯದ ಘೋಷವನು
ತೊಲಗಿಸಿ ಯುಗಗಳ ದೋಷವನು || 4 ||

Leave a Reply

Your email address will not be published. Required fields are marked *

*

code