ಧ್ಯೇಯನಾದ ನಿನಾದವಾಗಿದೆ ತರುಣ ಧಮನಿ ಧಮನಿಗಳಲಿ
ಅಮೃತತ್ವದ ಅಮರ ಚಿಂತನೆ ಸ್ಫುರಿತಗೊಂಡಿದೆ ಕಣ್ಣಲಿ || ಪ ||
ಮಾತೃ ಮಣ್ಣಿನ ಯಜ್ಞ ಜ್ವಾಲೆಗೆ | ಸ್ವಾರ್ಥ ದಹಿಸಿದೆ ಸ್ಫೂರ್ತಿ ಮೂಡಿದೆ
ಮೋಹ ದೇಹಗಳೊಟ್ಟಿ ಕಟ್ಟಿಗೆ | ಭಸ್ಮವಾಗಿದೆ ಭುಮಿಯ ಬೆಸುಗೆಗೆ || 1 ||
ಸವಾಲು ಸಾಸಿರ ಸಾಲುಗಟ್ಟಲಿ | ಕೋಟಿ ಕಂಠಗಳೆದ್ದು ನಿಂತಿವೆ
ಕಷ್ಟ ಬೆಟ್ಟಗಳೆಲ್ಲ ಸಹಿಸುವ | ಮೊನಚು ಮೂಡಿದೆ ಎದೆಯಲಿ || 2 ||
ರಕ್ತದೋಕುಳಿ ಸುತ್ತ ಚಿಮ್ಮಲಿ | ಸುಪ್ತಚೇತನ ಸ್ವರವು ಮೊಳಗಲಿ
ವಿಶ್ವದೆತ್ತರ ಮುಗಿಲ ಮೀರುತ | ಪುಟಿದು ಹಾರಲಿ ಅರುಣ ಕೇತನ || 3 ||