ದಾಹ ದಾಹ ದಿಗ್ವಿಜಯಕೆ

ದಾಹ ದಾಹ ದಿಗ್ವಿಜಯಕೆ, ಸ್ವಾಭಿಮಾನ ಭರಿತ ಹೃದಯಕೆ
ಸ್ವತಂತ್ರ ಜನತೆಯೆದೆಯ ಬೆಂಕಿ ಆರದೆಂದು ಆರದು
ಮಾತೃಭೂಮಿಗಳಿವು ದಾಸ್ಯ ಬಾರದೆಂದು ಬಾರದು        || ಪ ||

ಹಸಿರು ಘಟ್ಟ ಹಿಮದ ಬೆಟ್ಟ ಜಲಧಿ ಗಗನ ನಮ್ಮದು
ದುಷ್ಟತನವ ಮೆಟ್ಟಿ ನಿಲುವ ನ್ಯಾಯ ನಿಷ್ಠೆ ನಮ್ಮದು
ಪ್ರಿಯ ಸ್ವದೇಶ ರಕ್ಷಣಾರ್ಥ ಹೊರಟೆವಿದೋ ಹೊರಟೆವು
ಕಡೆಯ ತನಕ ಗೆಲ್ಲುವನಕ ನಿಲ್ಲೆವೆಲ್ಲು ನಿಲ್ಲೆವು                  || 1 ||

ನೀತಿಯಳಿದು ಸ್ಪರ್ಧೆ ಬೆಳೆದು ಬದುಕು ಸಾವಿನಂಚಲಿ
ಜಗದ ಜೀವ ತಪಿಸುತಿರಲು ಅಸುರ ಸುತರ ಸಂಚಲಿ
ಅಣುವಿನಸ್ತ್ರ ಕ್ಷಿಪಣಿ ಶಸ್ತ್ರವಿರಲು ದಿನವು ಸಿಡಿಯುತ
ದಿಗ್ದಿಗಂತದೆಲ್ಲ ಕಡೆಗೆ ಶೌರ್ಯಕಿಹುದು ಸ್ವಾಗತ              || 2 ||

ರಾಷ್ಟ್ರಯಜ್ಞದಗ್ನಿಯೊಡನೆ ಬಾಳಸಮಿಧೆ ಬೆರೆಯಲಿ
ಸ್ವಾತಂತ್ರ್ಯ ಪ್ರಣತಿಯುರಿಗೆ ರುಧಿರದಾಜ್ಯವೆರೆಯಲಿ
ಭೂಬುನಾದಿ ತಳದಲಿಂದು ಮೂಳೆ ಮೂಳೆ ಬೀಳಲಿ
ಹೊಸತು ಬಾಳ ನವ ವಿಶಾಲ ನಾಡ ಸೌಧವೇಳಲಿ            || 3 ||

Leave a Reply

Your email address will not be published. Required fields are marked *

*

code