ಭಾರತೀಯ ಹೃದಯವಿಂದು

ಭಾರತೀಯ ಹೃದಯವಿಂದು ರಾಷ್ಟ್ರ ದೇವನಾಲಯ
ಯುವ ಮನಸಿನ ಭಾವದಲೆಗೆ ರಾಷ್ಟ್ರಭಕ್ತಿ ಶ್ರುತಿ ಲಯ
ಕಲೆ-ಸಂಸ್ಕೃತಿ, ಕಥೆ-ಕವನದಿ ಗುರುಭಾರತ ಪರಿಚಯ
ಮನುಜಕುಲದ ಉನ್ನತಿಯೇ ತರುಣ ಗಣದ ಆಶಯ || ಪ ||

ಅನ್ವೇಷಣೆ, ಉತ್ಖನನವು ಹೊಸ ಪುರಾವೆ ನೀಡಿದೆ
ಭರತ ಭುವಿಯ ಹಿರಿಮೆಯರಿಮೆ ಹೊಸ ದಿಶೆಯನು ತೋರಿದೆ
ದಿಟದ ಚರಿತೆಯರಿತು ಜಗವು ನತಮಸ್ತಕವಾಗಿದೆ
ವಿದ್ವಜ್ಜನ ಸಂದೋಹದ ಮಣಿ ಮುಕುಟವು ಮಣಿದಿದೆ || 1 ||

ಪ್ರತಿಯೋಧನ ಎದೆಗುಂಡಿಗೆ ವಿಶ್ವಾಸದ ಆಗರ
ಹೊಸ ಸಾಧನ, ನವ ಚೇತನ ಉತ್ಸಾಹದ ಸಾಗರ
ಅಣು-ಗಣಕದ ಸಂಶೋಧನ ಪ್ರತಿ ಕ್ಷಣದಲೂ ಹೊಸತನ
ಕಡಲ ಗಾನ, ಗಗನಯಾನ ಯಶದ ಕಥನ ನೂತನ || 2 ||

ನಾಡು,ನುಡಿಯು, ಗಡಿ,ಗುಡಿಗಳು ಹೊಸ ಬಲವನು ಪಡೆದಿದೆ
ಕುಶಲ ಕರ್ಮ, ಪಶು ಪಾಲನೆ ನವೀನತೆಯ ಗಳಿಸಿದೆ
ಕೃಷಿ,ಶಿಕ್ಷಣ ನೀತಿಗಳಲಿ ತನ್ನತನವು ಮೂಡಿದೆ
ಸ್ವಾವಲಂಬಿ, ಸ್ವಾಭಿಮಾನಿ, ನವ ಸಮಾಜ ಉದಿಸಿದೆ || 3 ||

Leave a Reply

Your email address will not be published. Required fields are marked *

*

code