ಭಾರತದಾಲಯ ಬಿರಿಯುತಿದೆ

ಭಾರತದಾಲಯ ಬಿರಿಯುತಿದೆ
ಗೃಹದೊಡತಿಯ ಕಣ್ಣುರಿಯುತಿದೆ || ಪ ||

ವಾಯವ್ಯದ ದ್ವಾರದ ಹಿಮಪಂಕ್ತಿಯ ರಂಗೋಲೆ
ವನರಾಜಿಯ ತೋರಣದುಯ್ಯಾಲೆ
ವೈರಿಯ ಪದಘಾತಕೆ ಕರಸೆಳೆತಕೆ ಸಿಲುಕುತಲೆ
ಹುಡಿಯಾಗುರುಳಿದೆ ಮಣ್ಣಿನ ಮೇಲೆ ! || 1 ||

ನಂಬಿಕೆ ನಿದ್ದೆಯ ದ್ರೋಹದ ದಾಳಿಯು ಕಡಿವ ಪರಿ
ಕೈದಿಯದೋ ಹಿಮಶಿಖರದ ಪ್ರಹರಿ;
ಬುಟ್ಟಿಯೊಳೇಳುವ ನಾಗರ ನಿಟ್ಟುಸಿರನು ಮೀರಿ
ಏರಿಳಿಯುತಲಿದೆ ಸಿಂಧೂಲಹರಿ ! || 2 ||

ಚಿತ್ರಾಂಗದೆ ಚರಿಸಿದ ರವಿಯುದಯದ ಸೀಮೆಯಲಿ
ಧರ್ಮಜನನುಜಗೆ ಧಿಕ್ಕಾರದುಲಿ !
ಕ್ರಾಂತಿಯ ನೆಲೆ ಗಂಗಾ ತೀರದ ಬಂಗಾಲದಲಿ
ಕಾಳಿಯು ನಿಂದಿರುವಳು ಮೌನದಲಿ ! || 3 ||

ಮುನ್ನೀರಿನ ಹಿಂದೂಸಾಗರದಂಚಿನವರೆಗು
ಭೂಭಂಗದ ಕರುಳಿರಿಯುವ ಕೊರಗು !
ಭಾರತದಾಲಯದಧಿದೇವತೆಗೊದಗಿದ ವ್ಯಥೆಯು
ಕಣ್ಣುರಿಸುವ ಎದೆ ದಹಿಸುವ ಕಥೆಯು ! || 4 ||

ಪರರಾಘಾತದಿ ಭಾರತದಾಲಯ ಬಿರಿಯುತಿರೆ
ಭೂಗೃಹದೊಡತಿಯ ಕಣ್ಣುರಿಯುತಿರೆ
ಕುದಿಕುದಿಯುವ ಲಾವಾರಸ ತಾಯೊಡಲುಗುಳಲಿದೆ
ಭಾರತದಾಲಯವಿದ ಬೆಸೆಯಲಿದೆ ! || 5 ||

Leave a Reply

Your email address will not be published. Required fields are marked *

*

code