ಭಾರತಾವನಿ ನಿನ್ನ ಆಶ್ರುಧಾರೆಗೆ ತೊಯ್ದು
ತೆರೆಯಿತೆ ಪರಶಿವನ ಹೃದಯದ್ವಾರ
ಶಿಶು ರೂಪವನು ತಳೆದು ನಿನ್ನ ಮಡಿಲಲಿ ಬೆಳೆದು
ಹರಿಸಿದನೆ ಜಗದೆಡೆಗೆ ಪ್ರೇಮ ಪೂರ || ಪ ||
ನವಯುಗದ ದೃಷ್ಟಾರ ಯುವ ಮನದ ನೇತಾರ
ವಿವೇಕದಲಿ ಆನಂದ ಕಂಡ ಸಂತ
ಪತಿತ ಶೋಷಿತ ಮನಕೆ ಬಳಲಿ ಬಾಗಿದ ಜನಕೆ
ಬೆನ್ನೆಲುಬು ತಾನಾಗಿ ಸೆಟೆದು ನಿಂತ || 1 ||
ಅಂಗನೆಯರಾಹ್ವಾನ ಅಂದಣದ ಬಹುಮಾನ
ಒಂದಿನಿತು ಕುಂದಿಸದ ಧವಳ ಶೀಲ
ಜ್ಞಾನ ತೇಜೋಮಯದ ತೆರೆದ ಕಂಗಳಕಾಂತಿ
ಫಾಲನೇತ್ರನ ಕರದಿ ಹೊಳೆವ ಶೂಲ || 2 ||
ಮಣಿದ ಮಕುಟಗಳೆಷ್ಟೋ ಕುಣಿದ ಕಾಂಚನವೆಷ್ಟೋ
ಅಕಳಂಕ ಸ್ಥಿರಮತಿಯು ಕದಲಲಿಲ್ಲ
ಕುಸಿದ ಬಳಗದ ನೆನಪು ಹಸಿದ ದೇಶದ ನೆನಪು
ಅವನ ಗುರಿ ಮಾರ್ಗಗಳ ಮರೆಸಲಿಲ್ಲ || 3 ||
ವಿಶ್ವವೇದಿಕೆಯಿಂದ ಅವನ ವಿಜಯಧ್ವನಿಯು
ಭುವಿಯಗಲ ಬಾನಗಲ ಮರುದನಿಸಿತು
ತಮ್ಮ ಮತವೆ ದಿಟವು ಮತ್ತೆಲ್ಲ ಸೆಟೆಯೆಂದ
ಕೂಪಮಂಡೂಕಗಳ ಕಣ್ತೆರೆಸಿತು || 4 ||
ವಿಶ್ವಮಾತೆಯೇ ನಿನ್ನ ಕೀರ್ತಿಗಾಯನದಿಂದ
ವಿಶ್ವಾಸ ಸ್ಫೂರ್ತಿಗಳು ಮರುಕಳಿಸಿವೆ
ಜಾಗೃತಾತ್ಮರು ನಾವು ಗುರಿಯ ಗೆಲ್ಲುವ ಬಯಕೆ
ನಂಬಿಕೆಯ ನುಡಿಗಳಿವು ಅನುರಣಿಸಿವೆ || 5 ||
(ಸ್ವಾಮಿ ವಿವೇಕಾನಂದರ ಬಗ್ಗೆ ಬರೆದ ಹಾಡು)
ಗಾನಮಾಲಾದ ಎಲ್ಲ ಹಾಡುಗಳ ರಾಗ,ಸ್ವರದ ಆಡಿಯೋ ಕ್ಲಿಪ್ ಕೂಡ ಇಲ್ಲಿ ದೊರೆತರೆ ಹಾಡುಗಳ ಅಭ್ಯಾಸಕ್ಕೆ ತುಂಬಾ ಅನುಕೂಲ. ಹಾಡುಗಳನ್ನು ಕನ್ನಡದ ಗಡಿಯಾಚೆಗೆ ಕೊಂಡೊಯ್ಯಬಹುದು. ದಿಲ್ಲಿಯಲ್ಲಿರುವ ನನ್ನಂತಹ ತುಂಬಾ ಜನಕ್ಕೆ ಇದು ಲಾಭದಾಯಕ. ಕನ್ನಡದ ಗೀತೆಗಳನ್ನು ಅನ್ಯ ರಾಜ್ಯಗಳಲ್ಲೂ ಪ್ರಸಿದ್ಧಗೊಳಿಸಬಹುದು. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲೂ ಸಾಹಿತ್ಯ ದೊರೆಯುವಂತೆ ಆಗಬೇಕು.
ಕನ್ನಡದ ಹಾಡುಗಳಿಗೆ ಸ್ವರದ ಆಡಿಯೋ ಕ್ಲಿಪ್ ಜೋಡಿಸುವ ಕೆಲಸ ನಡೆಯುತ್ತಿದೆ.. ಶೀಘ್ರದಲ್ಲಿ ಎಲ್ಲಾ ಹಾಡುಗಳಿಗೂ ಧ್ವನಿಸುರುಳಿ ಲಭ್ಯವಾಗಲಿದೆ. ನಿಮ್ಮ ಸಲಹೆಗಳಿಗೆ ಧನ್ಯವಾದಗಳು